ಕೊಡ್ಲಿಪೇಟೆ, ಮಾ.೧ : ಇಲ್ಲಿನ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷೆಯಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಯಶೋಧ ಧರ್ಮಪ್ಪ ಮತ್ತು ಉಪಾಧ್ಯಕ್ಷೆಯಾಗಿ ನಗೀನ ಬಾನು ಅವರುಗಳು ಅವಿರೋಧವಾಗಿ ಆಯ್ಕೆಯಾದರು.

ಪಂಚಾಯಿತಿ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಸೋಮವಾರಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ. ಸುರೇಶ್ ಚುನಾವಣಾಧಿಕಾರಿಗಳಾಗಿ ಭಾಗವಹಿಸಿ ಚುನಾವಣಾ ಪ್ರಕ್ರಿಯೆ ನಡೆಸಿದರು. ಅಧ್ಯಕ್ಷ ಸ್ಥಾನವು ಹಿಂದುಳಿದ ವರ್ಗ ಬ. ಮತ್ತು ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಅ. ಮಹಿಳೆಗೆ ಮೀಸಲಾಗಿದ್ದು, ಯಶೋಧ ಮತ್ತು ನಗೀನಾ ಬಾನು ಅವರುಗಳು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ನಡೆಯಿತು.

ಒಟ್ಟು ೧೫ ಸದಸ್ಯ ಬಲದ ಪಂಚಾಯಿತಿಯಲ್ಲಿ ೧೨ ಚುನಾಯಿತ ಸದಸ್ಯರುಗಳು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆಗೆ ಬೆಂಬಲ ನೀಡಿದರು. ಮೂವರು ಸದಸ್ಯರು ಗೈರು ಹಾಜರಾಗಿದ್ದರು. ಸದಸ್ಯರುಗಳಾದ ಕೆ.ಆರ್. ಚಂದ್ರಶೇಖರ್, ನಿರ್ಗಮಿತ ಅಧ್ಯಕ್ಷ ಶೋಭಿತ್ ಗೌಡ , ಅಪ್ಸರ್ ಬೇಗಂ, ಗೀತಾ ತ್ಯಾಗರಾಜ್, ವಹಾಬ್ ಕೆ.ಎಂ., ಹನೀಫ್ ಕೆ.ಎಸ್, ಪ್ರಸನ್ನ ಡಿ.ಕೆ, ಅಶ್ವಿನಿ ಮಂಜುನಾಥ್ , ಕವಿತಾ ಗಂಗಾಧರ್, ಸುನಂದಾ ಪ್ರಕಾಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೂವಯ್ಯ ಹಾಜರಿದ್ದರು.