*ಗೋಣಿಕೊಪ್ಪ, ಮಾ. ೧: ರೈತ ಮಹಿಳೆ ಮೇಲೆ ಕೊಲೆ ಯತ್ನ ನಡೆಸಿರುವ ಕಾರ್ಮಿಕ ರಬೀಬ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ವಿಹೆಚ್ಪಿ ದುರ್ಗಾವಾಹಿನಿ ಸಂಯೋಜಕಿ ಅಂಬಿಕಾ ಉತ್ತಪ್ಪ ಒತ್ತಾಯಿಸಿದ್ದಾರೆ.
ಈ ರೀತಿಯ ದುಷ್ಕೃತ್ಯ ತಡೆಯಲು ಕಠಿಣ ಕ್ರಮದಿಂದ ಮಾತ್ರ ಸಾಧ್ಯವಾಗಿದ್ದು, ಈ ಬಗ್ಗೆ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
ಇಂತಹ ಘಟನೆ ಭವಿಷ್ಯಕ್ಕೆ ಎಚ್ಚರಿಕೆ ಗಂಟೆಯಾಗಿದೆ. ಎಲ್ಲರೂ ಅಸ್ಸಾಮಿಗಳು ಎಂದು ಹೇಳಿಕೊಳ್ಳುತ್ತಿರುವವರ ದಾಖಲಾತಿಯನ್ನು ಸ್ಥಳೀಯ ಪೊಲೀಸ್ ಇಲಾಖೆಗೆ ಒಪ್ಪಿಸಬೇಕಿದೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ಕಾಫಿ ಬೆಳೆಗಾರರು ಒಟ್ಟಾಗಿ ಸ್ಪಂದಿಸಬೇಕಿದೆ. ಇಂತಹ ಕಾರ್ಮಿಕರಿಂದ ಜಿಲ್ಲೆಯಲ್ಲಿ ಸಾಕಷ್ಟು ದುಷ್ಕೃತ್ಯಗಳು ನಡೆದಿವೆ. ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗದಿದ್ದಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಭಜರಂಗದಳ ಸಹ ಸಂಚಾಲಕ್ ವಿವೇಕ್ರೈ ಮಾತನಾಡಿ, ಕಾರ್ಮಿಕರಾಗಿ ಜಿಲ್ಲೆಯಲ್ಲಿ ಸೇರಿಕೊಂಡಿರುವ ಅಸ್ಸಾಮಿಗಳಿಂದ ಗೋಹತ್ಯೆ, ಗೋಮಾಂಸ ಮಾರಾಟ, ಮನೆ ಕಳ್ಳತನ, ತೋಟದ ಮಾಲೀಕರ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ಪೊಲೀಸ್ ಇಲಾಖೆ ತಕ್ಷಣ ಎಚ್ಚೆತ್ತುಕೊಂಡು ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಭಜರಂಗದಳ ಟಿ. ಶೆಟ್ಟಿಗೇರಿ ಹೋಬಳಿ ಸಂಚಾಲಕ ಮೀದೇರಿರ ಸಂತೋಷ್ ಮಾತನಾಡಿ, ಸ್ಥಳೀಯ ಕಾರ್ಮಿಕರ ಮೇಲೆ ಇಟ್ಟಿರುವ ವಿಶ್ವಾಸವನ್ನು ಕಾಫಿ ಬೆಳೆಗಾರರು ಅಸ್ಸಾಂ ಕಾರ್ಮಿಕರ ಮೇಲೆ ಇಡುವುದು ಜೀವಕ್ಕೆ ಅಪಾಯವಾಗುವ ಸಾಧ್ಯತೆ ಹೆಚ್ಚಿದೆ. ಇಂತಹವರನ್ನು ದೂರವಿಟ್ಟು, ಪೊಲೀಸರಿಗೆ ದಾಖಲಾತಿ ನೀಡಲು ಮುಂದಾಗಬೇಕು ಎಂದು ಮನವಿ ಮಾಡಿಕೊಂಡರು.