ಕಣಿವೆ, ಮಾ. ೧: ಕುಶಾಲನಗರ ತಾಲೂಕಾಗಿ ಘೋಷಣೆಯಾಗುವ ಮುನ್ನವೇ ನ್ಯಾಯಾಂಗ ಇಲಾಖೆ ಯಿಂದ ಮಂಜೂರಾತಿಯಾಗಿದ್ದAತಹ ನೂತನ ನ್ಯಾಯಾಲಯದ ಸಂಕೀರ್ಣಕ್ಕೆ ಬರೋಬ್ಬರಿ ೫ ವರ್ಷಗಳ ಬಳಿಕ ಶಂಕುಸ್ಥಾಪನೆಯ ಭಾಗ್ಯ ಕೂಡಿ ಬಂದಿದೆ.

ಕುಶಾಲನಗರದ ಹೃದಯ ಭಾಗದಲ್ಲಿರುವ ಪ್ರವಾಸಿ ಮಂದಿರಕ್ಕೆ ಒಳಪಟ್ಟ ಒಂದು ಎಕರೆ ಎಂಟು ಸೆಂಟು ಜಾಗವನ್ನು ನ್ಯಾಯಾಲಯ ಸಂಕೀರ್ಣದ ಕಟ್ಟಡ ನಿರ್ಮಾಣಕ್ಕೆಂದು ಕಾಯ್ದಿರಿಸಲಾಗಿತ್ತು.

ನಂತರದ ವರ್ಷಗಳಲ್ಲಿ ಕೊಡಗನ್ನು ಕಾಡಿದ ಜಲಪ್ರವಾಹ, ನಂತರ ನಾಡಿಗೆ ಆವರಿಸಿದ ಕೊರೊನಾ ಸೇರಿದಂತೆ ವಿವಿಧ ಕಾರಣಗಳಿಂದ ನೂತನ ನ್ಯಾಯಾಲಯದ ಸಂಕೀರ್ಣ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು.

ಇದೀಗ ತಾಲೂಕಾಗಿ ಕುಶಾಲನಗರ ಘೋಷಣೆಗೊಂಡು ಎರಡು ವರ್ಷಗಳ ಬಳಿಕ ನ್ಯಾಯಾಲಯದ ಸಂಕೀರ್ಣದ ಕಾಮಗಾರಿಗೆ ಚಾಲನೆ ದೊರೆತಂತಾಗಿದೆ.

ಕಳೆದ ಐದು ವರ್ಷಗಳ ಹಿಂದೆ ರೂ ೧೨ ಕೋಟಿ ವೆಚ್ಚದಲ್ಲಿ ಅಂತಿಮಗೊAಡಿದ್ದ ಕಟ್ಟಡ ಕಾಮಗಾರಿಯನ್ನು ಮತ್ತದೇ ವೆಚ್ಚದಲ್ಲಿ ಆರಂಭಿಸಲು ನ್ಯಾಯಾಂಗ ಇಲಾಖೆ ಲೋಕೋಪಯೋಗಿ ಇಲಾಖೆಗೆ ನಿರ್ದೇಶನ ನೀಡಿದ ಮೇರೆಗೆ ಇಲಾಖೆ ಇದೀಗ ಭೂಮಿ ಪೂಜೆಗೆ ಮುಂದಾಗಿದೆ.

ಈ ನಿಟ್ಟಿನಲ್ಲಿ ಪ್ರವಾಸಿ ಮಂದಿರದ ಮೀಸಲಿರಿಸಿದ ಜಾಗದಲ್ಲಿ ಬೆಳೆದು ನಿಂತಿದ್ದ ಸಣ್ಣ ಪುಟ್ಟ ಗಿಡ ಮರ, ಕಾಡು ಸಸ್ಯಗಳನ್ನು ತೆರವು ಮಾಡಿ ಸ್ವಚ್ಚ ಮಾಡಲಾಗುತ್ತಿದೆ. ಇಲ್ಲಿ ಬೆಳವಣಿಗೆ ಹಂತದಲ್ಲಿದ್ದ ಸುಮಾರು ೧೨ ರಿಂದ ೧೫ ರ ಪ್ರಾಯದ ತೇಗದ ಗಿಡಗಳನ್ನು ಅರಣ್ಯ ಇಲಾಖೆ ತೆರವುಗೊಳಿಸಿದೆ.

ನೂತನ ನ್ಯಾಯಾಲಯ ಸಂಕೀರ್ಣದ ಕಟ್ಟಡ ಕಾಮಗಾರಿ ಯನ್ನು ಆರಂಭಿಸುವ ಭೂಮಿ ಪೂಜೆಗೆ ರಾಜ್ಯ ಸರ್ಕಾರದ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳನ್ನು ಆಹ್ವಾನಿಸಲು ಕುಶಾಲನಗರದ ವಕೀಲರ ಸಂಘ ನಿರ್ಧರಿಸಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಆರ್.ಕೆ.ನಾಗೇಂದ್ರ ಬಾಬು ‘ಶಕ್ತಿ’ಗೆ ಮಾಹಿತಿ ನೀಡಿದರು.

ಕುಶಾಲನಗರ ತಾಲೂಕಿನ ಜನ ಸಾಮಾನ್ಯರಿಗೆ ಅನುಕೂಲವಾಗುವಂತೆ ಕುಶಾಲನಗರದ ಹೃದಯ ಭಾಗದ ಪ್ರವಾಸಿ ಮಂದಿರದ ಬಳಿಯ ಸುಸಜ್ಜಿತ ಪ್ರದೇಶದಲ್ಲಿ ಕಟ್ಟಡ ನಿರ್ಮಿಸಲು ಈ ಹಿಂದೆಯೇ ಚಿಂತನೆ ನಡೆಸಿ ಕಾರ್ಯಪ್ರವೃತ್ತರಾಗಿದ್ದ ಬಗ್ಗೆ ಆರ್.ಕೆ.ನಾಗೇಂದ್ರ ತಿಳಿಸಿದರು.

-ಮೂರ್ತಿ