ಕೂಡಿಗೆ, ಫೆ. ೨೮: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಕಾಳಿದೇವನ ಯುವಕ ಸಂಘದ ವತಿಯಿಂದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಉತ್ಸವದ ಉದ್ಘಾಟನೆ ಯನ್ನು ಹುದುಗೂರು ಶ್ರೀ ಉಮಾಮಹೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಟಿ.ಎಂ. ಚಾಮಿ ನೆರವೇರಿಸಿದರು.
ಗ್ರಾಮಾಂತರ ಪ್ರದೇಶಗಳಲ್ಲಿ ಯುವ ಜನಾಂಗ ಸಂಘಟಿತರಾದರೆ ಮಾತ್ರ ಸಮಾಜ ಅಭಿವೃದ್ಧಿಗೆ ಪೂರಕವಾಗುತ್ತದೆ. ಕ್ರೀಡಾಕೂಟ ಮೂಲಕ ಒಗ್ಗೂಡಿ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ. ಜೀವನದ ಸುಖ ಸಂತೋಷ ಹಾಗೂ ಯಶಸ್ಸು ಸಾಧಿಸಲು ಕ್ರೀಡೆ ಸಹಾಯಕವಾಗುತ್ತದೆ ಎಂದರು. ಕ್ರೀಡಾ ಜ್ಯೋತಿಯನ್ನು ಕಾಳಿಕಾಂಭ ಯುವಕ ಸಂಘದ ಅಧ್ಯಕ್ಷ ಐ.ಜಿ. ಶರತ್ ಸ್ವೀಕರಿಸಿ ಮಾತನಾಡಿ, ಮನುಷ್ಯನ ಆರೋಗ್ಯ ಮತ್ತು ಸರ್ವತೋಮುಖ ಬೆಳವಣಿಗೆಗೆ ಕ್ರೀಡೆ ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೈತ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಚಿಣ್ಣಪ್ಪ ವಹಿಸಿದ್ದರು. ವಾಲಿಬಾಲ್ ಕ್ರೀಡಾಕೂಟದಲ್ಲಿ ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕು ವ್ಯಾಪ್ತಿಯ ೧೮ ತಂಡಗಳು ಭಾಗವಹಿಸಿವೆ. ಇದೇ ಸಂದರ್ಭದಲ್ಲಿ ಕಬಡ್ಡಿ, ಸ್ಥಳೀಯರಿಗೆ ವಿವಿಧ ಕ್ರೀಡಾಕೂಟಗಳು ನಡೆದವು. ವೇದಿಕೆಯಲ್ಲಿ ಹುದುಗೂರು ಸಾಮಾಜಿಕ ಅರಣ್ಯ ಇಲಾಖೆಯ ಉಪ ವಲಯ ಅರಣ್ಯ ಅಧಿಕಾರಿ ಫೀರೋಜ್ ಖಾನ್, ಮೀಸಲು ಅರಣ್ಯ ಉಪ ವಲಯ ಅರಣ್ಯ ಅಧಿಕಾರಿ ಸತೀಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಶೋಭಾ ಪುಟ್ಟಪ್ಪ, ನೀರು ಬಳಕೆದಾರ ಸಂಘದ ಮಾಜಿ ಅಧ್ಯಕ್ಷ ಐ.ಎಸ್. ಗಣೇಶ್, ಗ್ರಾಮ ಪ್ರಮುಖ ರಾದ ಅಶ್ವಿನಿ ರೈ, ಕೆ.ಬಿ. ಧನಂಜಯ, ಗ್ರಾಮ ಪಂಚಾಯಿತಿ ಸದಸ್ಯರಾದ ರವಿ, ರತ್ನಮ್ಮ, ಯುವಕ ಸಂಘದ ಅಧ್ಯಕ್ಷ ಶರತ್, ಕಾರ್ಯದರ್ಶಿ ನೌಶಾದ್ ಸೇರಿದಂತೆ ಸಂಘದ ನಿರ್ದೇಶಕರು, ಗ್ರಾಮಸ್ಥರು ಹಾಜರಿದ್ದರು.