ಮಡಿಕೇರಿ, ಫೆ. ೨೮: ಚಾಲಕನ ನಿಯಂತ್ರಣ ತಪ್ಪಿದ ಗೊಬ್ಬರ ಸಾಗಿಸುತ್ತಿದ್ದ ಲಾರಿಯೊಂದು ರಸ್ತೆ ಬದಿಗೆ ಉರುಳಿ ಬಿದ್ದ ಘಟನೆ ಮಡಿಕೇರಿ ಸಮೀಪದ ಮೇಕೇರಿ ಬಳಿ ಮಂಗಳವಾರ ಬೆಳಿಗ್ಗೆ ಸುಮಾರು ೫.೩೦ರ ಸಮಯದಲ್ಲಿ ಸಂಭವಿಸಿದೆ. ಲಾರಿ ಚಾಲಕ ಮತ್ತು ಕ್ಲೀನರ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಂಗಳೂರಿನಿAದ ಹುದಿಕೇರಿಗೆ ಲಾರಿಯಲ್ಲಿ ಯೂರಿಯಾ ಗೊಬ್ಬರ ಸಾಗಿಸಲಾಗುತ್ತಿತ್ತು. ಮಡಿಕೇರಿಯಿಂದ ಮೇಕೇರಿ ರಸ್ತೆಗಾಗಿ ಬಂದ ಲಾರಿ ಮೇಕೇರಿ ಮಸೀದಿ ಬಳಿಯ ಇಳಿಜಾರು ರಸ್ತೆಯಲ್ಲಿ ನಿಯಂತ್ರಣ ಕಳೆದುಕೊಂಡು ಮಗುಚಿ ಬಿದ್ದಿದೆ. ಗೊಬ್ಬರ ಚೀಲಗಳು ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿದ್ದು, ಕೆಲವು ಚೀಲಗಳಿಗೆ ಹಾನಿಯಾಗಿದೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕೆಲವು ದಿನಗಳ ಹಿಂದೆ ಇದೇ ಸ್ಥಳದಲ್ಲಿ ಸುಣ್ಣ ಸಾಗಿಸುತ್ತಿದ್ದ ಲಾರಿಯೊಂದು ಮಗುಚಿ ಬಿದ್ದಿತ್ತು. ಸ್ಥಳದಲ್ಲಿ ಅಪಘಾತ ವಲಯವೆಂದು ಯಾವುದೇ ಸೂಚನಾ ಫಲಕಗಳನ್ನು ಅಳವಡಿಸದ ಹಿನ್ನೆಲೆಯಲ್ಲಿ ಕಳೆದ ಹಲವು ಸಮಯದಿಂದ ಇಳಿಜಾರು ರಸ್ತೆಯ ತಿರುವಿನಲ್ಲಿ ಆಗಾಗ್ಗೆ ಅಪಘಾತ ಪ್ರಕರಣಗಳು ಸಂಭವಿಸುತ್ತಿದ್ದು, ಸಂಬAಧಿಸಿದವರು ಕೂಡಲೇ ಸ್ಥಳದಲ್ಲಿ ಸೂಚನಾಫಲಕವನ್ನು ಅಳವಡಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.