(ವಿಶೇಷ ವರದಿ: ಹೆಚ್.ಕೆ. ಜಗದೀಶ್)

ಗೋಣಿಕೊಪ್ಪಲು, ಫೆ. ೨೮ : ಗ್ರಾಮೀಣ ಭಾಗದ ನಾಗರಿಕರಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್‌ಗಳು ಚಲಿಸುತ್ತಿದ್ದವು. ಇದರಿಂದ ಪ್ರತಿನಿತ್ಯ ನಗರ ಪ್ರದೇಶಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಸೇರಿದಂತೆ ನಾಗರಿಕರಿಗೆ ಅನುಕೂಲವಾಗುತ್ತಿತ್ತು.

ಇತ್ತೀಚಿನ ದಿನಗಳಲ್ಲಿ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಮೈಸೂರು ವಿಭಾಗದ ೨೦ಕ್ಕೂ ಅಧಿಕ ಮಾರ್ಗಗಳನ್ನು ಇಲಾಖೆಯು ದಿಢೀರನೆ ರದ್ದುಪಡಿಸಿದೆ. ದಕ್ಷಿಣ ಕೊಡಗಿನ ಪ್ರಮುಖ ಗ್ರಾಮೀಣ ಭಾಗಗಳಾದ ಕಾನೂರು-ಕುಟ್ಟ, ಶ್ರೀಮಂಗಲ-ಕುಟ್ಟ, ಕಿರುಗೂರು-ಬಾಳೆಲೆ, ಮಾಯಮುಡಿ, ಗೋಣಿಕೊಪ್ಪ-ಬಿ. ಶೆಟ್ಟಿಗೇರಿ, ಸೇರಿದಂತೆ ಹಲವು ಮಾರ್ಗಗಳಲ್ಲಿ ಮೈಸೂರು ವಿಭಾಗದಿಂದ ೨೦ಕ್ಕೂ ಅಧಿಕ ಬಸ್‌ಗಳು ಪ್ರತಿನಿತ್ಯ ಹುಣಸೂರು-ಪಂಚವಳ್ಳಿ-ತಿತಿಮತಿ-ಗೋಣಿಕೊಪ್ಪ ಮಾರ್ಗವಾಗಿ ಆಗಮಿಸಿ ನಗರದಿಂದ ಗ್ರಾಮೀಣ ಭಾಗಕ್ಕೆ ತೆರಳುತ್ತಿದ್ದವು. ಇದರಿಂದ ಪ್ರತಿನಿತ್ಯ ನಾಗರಿಕರಿಗೆ ಅನುಕೂಲವಾಗುತ್ತಿತ್ತು. ಬಹುಮುಖ್ಯವಾಗಿ ಗ್ರಾಮೀಣ ಭಾಗದಲ್ಲಿರುವ ವಿದ್ಯಾರ್ಥಿಗಳು ನಗರ ಪ್ರದೇಶದ ಶಾಲಾ ಕಾಲೇಜುಗಳಿಗೆ ಆಗಮಿಸಲು ಬಸ್ ಪಾಸ್‌ಅನ್ನು ಹೊಂದಿದ್ದರು. ಇದೀಗ ಬಸ್‌ಗಳು ಮಾರ್ಗವನ್ನು ರದ್ದುಪಡಿಸಿರುವುದರಿಂದ ಸಮಸ್ಯೆ ಎದುರಾಗಿದೆ.

ಬಿ. ಶೆಟ್ಟಿಗೇರಿ-ವೀರಾಜಪೇಟೆ, ಬಿ. ಶೆಟ್ಟಿಗೇರಿ-ಪೊನ್ನಂಪೇಟೆ ಸೇರಿದಂತೆ ಬಹುತೇಕ ಗ್ರಾಮೀಣ ಭಾಗದಲ್ಲಿ ಬಸ್‌ಗಳ ಸೇವೆ ರದ್ದಾಗಿರುವುದರಿಂದ ಕಿ.ಮೀ.ಗಟ್ಟಲೆ ವಿದ್ಯಾರ್ಥಿಗಳು ತಮ್ಮ ಮನೆಯಿಂದ ನಡೆದೆ ತೆರಳಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ದ.ಕೊಡಗಿನ ಗ್ರಾಮೀಣ ಪ್ರದೇಶದಲ್ಲಿ ಇತ್ತೀಚೆಗೆ ಹುಲಿ ಹಾಗೂ ಕಾಡಾನೆಗಳ ಉಪಟಳ ನಡುವೆ ವಿದ್ಯಾರ್ಥಿಗಳು ಹಾಗೂ ನಾಗರಿಕರು ಭಯದ ವಾತಾವರಣದಿಂದಲೇ ನಡೆದುಕೊಂಡೇ ತೆರಳಬೇಕಾಗಿದೆ. ಸರ್ಕಾರ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವ ಹಿನ್ನೆಲೆಯಲ್ಲಿ ಹಲವು ಮಾರ್ಗಗಳನ್ನು ಒದಗಿಸಿ ಬಸ್‌ಗಳನ್ನು ಸೇವೆಗಾಗಿ ನೀಡಿತ್ತು. ಇದೀಗ ಮೈಸೂರು ಭಾಗದಿಂದ ಕೊಡಗಿನ ಭಾಗಕ್ಕೆ ಪ್ರತಿನಿತ್ಯ ಬರುತ್ತಿದ್ದಂತಹ ರೂಟ್ ಬಸ್‌ಗಳನ್ನು ಗ್ರಾಮೀಣ ಪ್ರದೇಶಗಳಿಗೆ ಸ್ಥಗಿತಗೊಳಿಸಲಾಗಿದೆ.

ಗ್ರಾಮೀಣ ಭಾಗಕ್ಕೆ ತೆರಳುತ್ತಿದ್ದ ಬಸ್‌ಗಳ ಮಾರ್ಗಗಳನ್ನು ಬದಲಿಸಿರುವ ಮೈಸೂರು ವಿಭಾಗೀಯ ಕರ್ನಾಟಕ ಸಾರಿಗೆ ಸಂಸ್ಥೆಯ ೨೦ ಬಸ್ ಮಾರ್ಗವನ್ನು ನಗರ ಪ್ರದೇಶಗಳಿಗೆ ವರ್ಗಾವಣೆ ಮಾಡಿರುವುದಾಗಿ ಇಲಾಖೆಯ ಮಾಹಿತಿಗಳು ದೃಢಪಡಿಸಿವೆ. ಕೊಡಗಿನ ಮಡಿಕೇರಿ ಸಾರಿಗೆ ಸಂಸ್ಥೆಯ ಡಿಪೋದಿಂದ ೩೦ಕ್ಕೂ ಅಧಿಕ ಬಸ್‌ಗಳು ಮಡಿಕೇರಿ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಕ್ಕೆ ತೆರಳುತ್ತಿವೆ.

(ಮೊದಲ ಪುಟದಿಂದ) ದ.ಕೊಡಗಿನ ಭಾಗದ ಗ್ರಾಮೀಣ ಭಾಗಕ್ಕೆ ಬಸ್ ಸೇವೆ ನೀಡಲು ಮಡಿಕೇರಿ ಡಿಪೋದ ಸಾರಿಗೆ ಸಂಸ್ಥೆಗೆ ಸಾಧ್ಯವಾಗುತ್ತಿಲ್ಲ. ಇದರಿಂದ ದ.ಕೊಡಗಿನ ಗ್ರಾಮೀಣ ಭಾಗದ ಜನತೆಗೆ ಸಮಸ್ಯೆ ಉಲ್ಬಣಿಸಿದೆ. ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ನಡೆಯುವ ಸಭೆಯಲ್ಲಿ ಈ ಬಗ್ಗೆ ಗ್ರಾಮದ ಜನತೆ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರ ಗಮನ ಸೆಳೆದಿದ್ದರು. ಸಭೆಯಲ್ಲಿದ್ದ ಮಡಿಕೇರಿ ಡಿಪೋ ವ್ಯವಸ್ಥಾಪಕರು ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ ಇಲ್ಲಿಯ ತನಕ ಬಸ್ ಸೇವೆಗಳು ಆರಂಭಗೊAಡಿಲ್ಲ.