ಕಣಿವೆ, ಫೆ. ೨೮: ಈ ಜನವಸತಿ ಪ್ರದೇಶ ಯಾವುದೋ ಕಾಡಂಚಿನ ದಲ್ಲ. ಅಥವಾ ವಾಹನಗಳ ಸಂಚಾರ ಹಾಗೂ ಸಂಪರ್ಕಗಳಿಲ್ಲದ ಊರಂತೂ ಅಲ್ಲವೇ ಅಲ್ಲ. ಇನ್ನು ಜಿಲ್ಲೆಯ ಗಡಿಭಾಗದಲ್ಲಿನ ಸರ್ಕಾರ ಗಳ ನಿರ್ಲಕ್ಷಿತ ಹಳ್ಳಿ ಮೊದಲೇ ಅಲ್ಲ... ಹೇಳಿ-ಕೇಳಿ ಇದು ನಾಗಾಲೋಟದಲ್ಲಿ ಬೆಳೆಯುತ್ತಿರುವ ಕೊಡಗಿನ ಪ್ರಮುಖ ವಾಣಿಜ್ಯ ನಗರಿ, ಶೈಕ್ಷಣಿಕ ನಗರಿ, ಸಾಂಸ್ಕೃತಿಕ ನಗರ ಕುಶಾಲನಗರದ ಬಡಾವಣೆ.
ಇಲ್ಲಿ ವಾಸ ಮಾಡುತ್ತಿರುವ ಜನರು ಕಳೆದ ಹತ್ತಾರು ವರ್ಷಗಳ ಮೊದಲು ಲಕ್ಷೋಪಲಕ್ಷ ರೂಪಾಯಿ ಗಳ ಹಣ ವ್ಯಯಿಸಿ ಖರೀದಿಸಿದ ನಿವೇಶನಗಳಲ್ಲಿ ಜೀವಮಾನವಿಡೀ ಸಂಪಾದಿಸಿದ ಹಣ ಸುರಿದು ಮನೆ ಗಳನ್ನು ಕಟ್ಟಿಕೊಂಡು ಆಡಳಿತ ವ್ಯವಸ್ಥೆಗಳಿಗೆ ಹಿಡಿಶಾಪ ಹಾಕಿ ಕೊಂಡು ವಾಸ ಮಾಡುತ್ತಿದ್ದಾರೆ.
ಇದು ಈಗಷ್ಟೇ ಕುಶಾಲನಗರ ಪುರಸಭೆಗೆ ಲೀನವಾದ ಮುಳ್ಳುಸೋಗೆ ಪಂಚಾಯಿತಿಯ ವ್ಯಾಪ್ತಿಯ ಮೂರನೇ ವಾರ್ಡಿಗೆ ಒಳಪಟ್ಟ ಕೆ.ಸಿ. ಬಡಾವಣೆಯ ಕಥೆ - ವ್ಯಥೆ.
ಇಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸವಿರುವ ಕೆಲವು ಮಂದಿ ಸ್ಥಳೀಯ ಪಂಚಾಯಿತಿ ಮೂಲ ಸೌಲಭ್ಯಗಳನ್ನು ಒದಗಿಸದ ಕಾರಣ ಬಡಾವಣೆಯ ನಿವಾಸಿಗಳು ಸೇರಿ ಕೊಂಡು ಒಂದಷ್ಟು ಹಣ ಸಂಗ್ರಹಿಸಿ ಪಿವಿಸಿ ಪೈಪುಗಳನ್ನು ಖರೀದಿಸಿ ತಂದು ರಸ್ತೆಯ ಮಧ್ಯೆ ಪೈಪುಗಳನ್ನು ಹೂತಿಟ್ಟು ಪ್ರತಿ ಮನೆಗಳ ತ್ಯಾಜ್ಯ ನೀರನ್ನು ಈ ಪೈಪುಗಳ ಮೂಲಕ ನೂರಾರು ಮೀಟರ್ ದೂರದ ತಗ್ಗು ಪ್ರದೇಶಕ್ಕೆ ಹರಿಸುತ್ತಿದ್ದಾರೆ.
ಇನ್ನು ಹಲವರು ತಮ್ಮ ಮನೆಗಳ ಮುಂದಷ್ಟೆ ಪೈಪುಗಳನ್ನು ಹಾಕಿ ಕೊಂಡು ಗೃಹ ಬಳಕೆಯ ತ್ಯಾಜ್ಯ ಹಾಗೂ ಮಲಿನ ನೀರನ್ನು ಮನೆಯ ಮುಂದಿನ ರಸ್ತೆಗಳ ನಡುವೆಯೇ ಹರಿಸುತ್ತಿದ್ದಾರೆ.
ಮಳೆಗಾಲದಲ್ಲಿ ನರಕ ಸಂಚಾರ
ಬೇಸಿಗೆಯ ದಿನಗಳಲ್ಲಿ ಮನೆಯ ಮುಂದೆ ತ್ಯಾಜ್ಯ ಹರಿಸಿ ಅದರೊಳಗೆಯೇ ಒಂದಷ್ಟು ಸುಗಮ ಸಂಚಾರಗೈವ ಮಂದಿ, ಮಳೆಗಾಲದ ನರಕದ ಸಂಚಾರ ಇವರನ್ನು ಧೃತಿಗೆಡಿಸಿದೆ.
ಅಂದರೆ ಕಚ್ಚಾ ರಸ್ತೆಯಲ್ಲಿ ವಾಹನಗಳ ಚಕ್ರಗಳು ನಿಂತಲ್ಲೇ ಗಿರಕಿ ಹೊಡೆಯುವ ಕಾರಣ ಏಕಾದರೂ ವಾಹನಗಳನ್ನು ಖರೀದಿಸಿದೆವೋ ಎಂದುಕೊAಡು ತಮಗೆ ತಾವೇ ಶಪಿಸಿಕೊಳ್ಳುವಂತಹ ದುಸ್ಥಿತಿ ನಿರ್ಮಾಣವಾಗಿದೆ.
ಕುಸಿದು ಬಿದ್ದಿರುವ ಯುಜಿಡಿ ಹೊಂಡಗಳು
ಇದೇ ಜನವಸತಿ ಪ್ರದೇಶದಲ್ಲಿ ಕಳೆದ ಕೆಲವು ವರ್ಷಗಳ ಹಿಂದೆಯೇ ನಿರ್ಮಿಸಿರುವ ಒಳಚರಂಡಿ ಮಂಡಳಿಯ ಕಾಂಕ್ರೀಟ್ ಹೊಂಡ ಗಳು ಕುಸಿದು ಬಿದ್ದಿವೆ. ಹಾಗಿದ್ದೂ ಕೂಡ ಸಂಬAಧಿತ ಇಲಾಖೆಯವರು ಈ ಹೊಂಡಗಳನ್ನು ಸರಿಪಡಿಸಿ ಜನರ ಸುಗಮ ಸಂಚಾರ ವ್ಯವಸ್ಥೆಗೆ ಅನುವು ಮಾಡಿಲ್ಲ.
ಪುರಸಭೆಗೆ ಸೇರಿದ ಸಂತಸ
ಒಂದು ಕಡೆ
ಇದುವರೆಗೂ ಪ್ರಯೋಜನ ನೀಡದ ಮುಳ್ಳುಸೋಗೆ ಗ್ರಾಮಾಡಳಿತದಲ್ಲಿದ್ದೆವು. ಇನ್ನು ಮುಂದೆ ಕುಶಾಲನಗರ ಪುರಸಭೆಯ ಅಧೀನಕ್ಕೆ ಒಳಪಟ್ಟ ಕಾರಣ ಪುರಸಭೆಗೆ ಸರ್ಕಾರದಿಂದ ಸಿಗುವ ವ್ಯಾಪಕ ಅನುದಾನದಡಿ ನಮ್ಮ ಜನವಸತಿ ಪ್ರದೇಶಗಳು ಶಾಪದಿಂದ ಮುಕ್ತಿಯಾಗಲಿವೆ ಎಂಬ ಸಂತಸ ದಲ್ಲಿ ಇಲ್ಲಿನ ಜನರಿದ್ದಾರೆ.
ಕೂಡಲೇ ಚರಂಡಿ - ರಸ್ತೆ ಮಾಡಿಕೊಡಿ
ನಮಗೆ ಬೇರಾವ ಸೌಲಭ್ಯಗಳು ಇಲ್ಲದಿದ್ದರೂ ಚಿಂತೆಯಿಲ್ಲ. ನಮಗೆ ಬೇಕಿರುವುದು ಅತೀ ಮುಖ್ಯವಾಗಿ ಮನೆಯ ಮುಂದೆ ಚರಂಡಿ ಹಾಗೂ ಸೂಕ್ತ ರಸ್ತೆ. ಮಳೆಗಾಲದ ಒಳಗಾಗಿ ಮಾಡಿಕೊಡಿ ಎಂದು ಇಲ್ಲಿನ ನಿವಾಸಿಗಳಾದ ಗುರುಪ್ರಸಾದ್, ಸಚಿನ್, ಉದಯ ಮಾಸ್ಟರ್, ಕುಸುಮಾವತಿ, ಬೈತಡ್ಕ ಕೇಶವ ಮೊದಲಾದವರು ಪುರಸಭೆಯನ್ನು ಒತ್ತಾಯಿಸಿದ್ದಾರೆ.