ಸೋಮವಾರಪೇಟೆ, ಫೆ. ೨೮: ಸಮೀಪದ ಚೌಡ್ಲು ಗ್ರಾಮದ ಕೆರೆಗೆ ಹಾರಿ ಕಾರ್ಮಿಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಮಧ್ಯಾಹ್ನ ನಡೆದಿದ್ದು, ಕಳೆದ ೧೧ ದಿನಗಳಲ್ಲಿ ಈ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ೨ನೇ ಪ್ರಕರಣ ವರದಿಯಾಗಿದೆ.
ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೆಬೆಟ್ಟ ನಿವಾಸಿ ಶೇಷಪ್ಪ ಹಾಗೂ ಜಯಮ್ಮ ಅವರ ಪುತ್ರ, ಅವಿವಾಹಿತನಾಗಿದ್ದ ಲವಕುಮಾರ್(೩೮) ಎಂಬಾತನೇ ಆತ್ಮಹತ್ಯೆಗೆ ಶರಣಾದವನು. ಕೂಲಿ ಕೆಲಸ ಮಾಡಿಕೊಂಡು ತಾಯಿಯೊಂದಿಗೆ ವಾಸವಿದ್ದ ಲವಕುಮಾರ್(ಪುಟ್ಟ) ಇಂದು ಬೆಳಗ್ಗೆಯಿಂದಲೇ ಮದ್ಯಪಾನ ಮಾಡಿಕೊಂಡಿದ್ದು, ಮಧ್ಯಾಹ್ನ ೧.೩೦ರ ಸುಮಾರಿಗೆ ಮನೆಯಿಂದ ಬಂದು ಕೆರೆಯ ದಡದಲ್ಲಿ ಕುಳಿತಿದ್ದ ಎನ್ನಲಾಗಿದೆ.
ಈ ಸಂದರ್ಭ ದಡದಲ್ಲಿಯೂ ಮದ್ಯಪಾನ ಮಾಡಿದ್ದು, ೨.೩೦ರ ಸುಮಾರಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೆಲವೇ ನಿಮಿಷಗಳಲ್ಲಿ ಮೃತದೇಹ ತೇಲುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಪೊಲೀಸ್ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮೃತದೇಹವನ್ನು ಕೆರೆಯಿಂದ ಹೊರ ತೆಗೆದಿದ್ದಾರೆ.
ಪೊಲೀಸ್ ಠಾಣೆಯ ಮುಖ್ಯ ಪೇದೆ ಹೆಚ್.ಪಿ. ಸುರೇಶ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಪಟ್ಟಣದ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
೧೨ ದಿನದಲ್ಲಿ ೨ನೇ ಪ್ರಕರಣ: ಕಳೆದ ೧೨ ದಿನಗಳ ಹಿಂದೆ ಮಡಿಕೇರಿಯ ಕಾಲೇಜು ವಿದ್ಯಾರ್ಥಿನಿಯೋರ್ವಳು ತನ್ನ ಅಜ್ಜಿಯ ಮನೆಯಿರುವ ಗಾಂಧಿನಗರಕ್ಕೆ ತೆರಳುವ ಸಂದರ್ಭ ಇದೇ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದಾಗಿ ೧೨ ದಿನಗಳಾಗಿದ್ದು, ಇಂದು ಕಾರ್ಮಿಕ ಲವಕುಮಾರ್ ಸಹ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.