ಕುಶಾಲನಗರ, ಫೆ. ೨೮: ಕುಶಾಲನಗರ ಪಟ್ಟಣದಲ್ಲಿ ನಿರ್ಮಾಣ ಗೊಂಡಿರುವ ಕಲಾಭವನದ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸುವ ಸಂಬAಧ ಸರ್ಕಾರದಿಂದ ತಕ್ಷಣ ರೂ. ೩೦ ಲಕ್ಷ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.

ಅವರು ಕುಶಾಲನಗರ ಕಲಾಭವನದಲ್ಲಿ ಪ್ರದರ್ಶನಗೊಂಡ ಟಿಪ್ಪು ನಿಜ ಕನಸುಗಳು ನಾಟಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಸುದ್ದಿಗಾರರೊಂದಿಗೆ ಮಾತನಾಡಿದರು.

ಸುಮಾರು ೯ ವರ್ಷಗಳಿಂದ ಪ್ರಾರಂಭವಾದ ಕಲಾಭವನ ಕಟ್ಟಡ ಕಾಮಗಾರಿ ಪೂರ್ಣಗೊಳ್ಳದೆ ನೆನೆಗುದಿಗೆ ಬಿದ್ದಿದ್ದು, ಈ ಬಗ್ಗೆ ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರ ಮನವಿಗೆ ಸ್ಪಂದಿಸಿದ ಶಾಸಕರು ಚುನಾವಣೆಗೆ ಮುನ್ನ ಕಲಾಭವನ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪ ಣೆಗೊಳಿಸಲು ಸಂಬAಧಪಟ್ಟ ಇಲಾಖಾ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಕಲಾಭವನದಲ್ಲಿ ನಡೆದ ಅಡ್ಡಂಡ ಕಾರ್ಯಪ್ಪ ರಚಿತ ಟಿಪ್ಪು ನಿಜ ಕನಸುಗಳು ನಾಟಕ ಪ್ರದರ್ಶನ ಯಶಸ್ವಿಯಾಗಿ ನಡೆಯಿತು. ನಲವತ್ತಕ್ಕೂ ಅಧಿಕ ಕಲಾವಿದರಿಂದ ಪ್ರದರ್ಶನಗೊಂಡ ನಾಟಕ ಪ್ರೇಕ್ಷಕರ ಗಮನ ಸೆಳೆಯಿತು.

ಮೂರು ಗಂಟೆಗಳ ಕಾಲ ನಡೆದ ನಾಟಕವನ್ನು ಸುಮಾರು ೫೦೦ಕ್ಕೂ ಅಧಿಕ ಪ್ರೇಕ್ಷಕರು ವೀಕ್ಷಿಸಿದರು. ಇದೇ ಸಂದರ್ಭ ಸ್ಥಳೀಯ ಪ್ರಮುಖರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರನ್ನು ಸನ್ಮಾನಿಸಿ, ಗೌರವಿಸಿದರು.