ಮುಳ್ಳೂರು, ಫೆ. ೨೮: ಕೊಡಗು-ಮೈಸೂರು ಜಿಲ್ಲೆಯ ಕೆಲವು ಕಡೆಗಳಲ್ಲಿ ಅರಣ್ಯದಲ್ಲಿ ಕಾಡ್ಗಿಚ್ಚು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಶನಿವಾರಸಂತೆ ಹೋಬಳಿ ವ್ಯಾಪ್ತಿಯ ರೈತರು ಕಾಡ್ಗಿಚ್ಚು ಸಂಭವಿಸದAತೆ ಅರಣ್ಯ ಇಲಾಖೆ ಎಚ್ಚರವಹಿಸುವಂತೆ ಶನಿವಾರಸಂತೆ ಅರಣ್ಯ ವಲಯಾಧಿಕಾರಿಗೆ ಮನವಿ ಸಲ್ಲಿಸಿದರು.
ಶನಿವಾರಸಂತೆ ಆರ್ಎಫ್ಒ ಪ್ರಪುಲ್ಶೆಟ್ಟಿ ಅವರಿಗೆ ನೀಡಿದ ಮನವಿ ಪತ್ರದಲ್ಲಿ ಬೇಸಿಗೆ ಸಮಯದಲ್ಲಿ ಅರಣ್ಯಕ್ಕೆ ಕಾಡ್ಗಿಚ್ಚು ಸಂಭವಿಸಿ ಅರಣ್ಯ ನಾಶವಾಗುವುದರ ಜೊತೆಯಲ್ಲಿ ಅರಣ್ಯ ಜೀವಿಗಳು ಬೆಂಕಿಗೆ ಆಹುತಿಯಾಗುತ್ತವೆ ಹಾಗೂ ಅರಣ್ಯದ ಅಂಚಿನ ರೈತರ ತೋಟ, ಹೊಲಗಳಿಗೆ ಕಾಡ್ಗಿಚ್ಚು ಹರಡಿ ಬೆಳೆ ನಷ್ಟವಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಅರಣ್ಯ ಇಲಾಖೆ ಅರಣ್ಯಕ್ಕೆ ಕಾಡ್ಗಿಚ್ಚು ಹರಡದಂತೆ ಎಚ್ಚರವಹಿಸುವ ಸಲುವಾಗಿ ಸಿಬ್ಬಂದಿಗಳನ್ನು ಪ್ರತಿದಿನ ಅರಣ್ಯ ಅಂಚಿನ ಭಾಗದಲ್ಲಿ ಗಸ್ತು ತಿರುಗಲು ನಿಯೋಜಿಸಬೇಕು. ಬೆಂಕಿಯನ್ನು ನಂದಿಸಲು ಪೂರ್ವಭಾಗಿಯಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಕಾಡ್ಗಿಚ್ಚಿನಿಂದ ರೈತರ ತೋಟ, ಹೊಲ ಗದ್ದೆಗಳಿಗೆ ರಕ್ಷಣೆ ನೀಡುವಂತೆ ಮನವಿಯಲ್ಲಿ ಕೋರಲಾಗಿದೆ. ಮನವಿ ಪತ್ರ ಸ್ವೀಕರಿಸಿದ ಆರ್ಎಫ್ಒ ಪ್ರಪುಲ್ ಶೆಟ್ಟಿ ಅರಣ್ಯದ ಅಂಚಿನಲ್ಲಿ ಕಾಡ್ಗಿಚ್ಚು ಹರಡದಂತೆ ಇಲಾಖೆ ಈಗಾಗಲೇ ಕ್ರಮಕೈಗೊಂಡಿದ್ದು, ಮತ್ತಷ್ಟು ಎಚ್ಚರ ವಹಿಸಲಾಗುವುದೆಂದು ಭರವಸೆ ನೀಡಿದರು.
ಈ ಸಂದರ್ಭ ಮಡಿಕೇರಿ ಕ್ಷೇತ್ರ ಜೆಡಿಎಸ್ ಮುಖಂಡ ಎಚ್.ಆರ್. ಸುರೇಶ್, ರೈತ ಪ್ರಮುಖರಾದ ಮತ್ತೂರು ಮಹೇಶ್, ಮಾದ್ರೆ ಕುಶಾಲಪ್ಪ, ಸುರೇಶ್, ರಾಜು, ಅಪ್ಪಾಜಿಗೌಡ ಮುಂತಾದವರು ಹಾಜರಿದ್ದರು.