(ವಿಶೇಷ ವರದಿ: ಹೆಚ್.ಕೆ. ಜಗದೀಶ್)

ಗೋಣಿಕೊಪ್ಪಲು, ಫೆ. ೨೭ : ಆದಿವಾಸಿಗಳು ಅರಣ್ಯಗಳಲ್ಲಿ ಲಭ್ಯವಾಗುವ ವಿವಿಧ ಬಗೆಯ ಕಿರು ಉತ್ಪನ್ನಗಳನ್ನು ವಿವಿದ್ಧೋದ್ದೇಶ ಸಹಕಾರ ಸಂಘದಲ್ಲಿ ನೀಡುವ ಮೂಲಕ ಗಿರಿಜನರು ತಮ್ಮ ಆದಾಯವನ್ನು ಹೆಚ್ಚು ಮಾಡಿಕೊಳ್ಳುತ್ತಿದ್ದರು. ಬಹುತೇಕ ಲ್ಯಾಂಪ್ಸ್ಗಳು ಆದಿವಾಸಿಗಳು ತರುವ ಉತ್ಪನ್ನಗಳನ್ನೆ ನಂಬಿ ತಮ್ಮ ಸಂಘವನ್ನು ಮುನ್ನಡೆಸುತ್ತಿದ್ದರು. ವಾರ್ಷಿಕವಾಗಿ ಲಕ್ಷಾಂತರ ವಹಿವಾಟು ಇದರಿಂದಲೇ ನಡೆಯುತ್ತಿತ್ತು. ಸರ್ಕಾರವು ಈ ನಿಟ್ಟಿನಲ್ಲಿ ವಿಶೇಷವಾಗಿ ಗಿರಿಜನರ ದೊಡ್ಡ ಪ್ರಮಾಣದ ವಿವಿದ್ಧೋದ್ದೇಶ ಸಹಕಾರ ಸಂಘಕ್ಕೆ ಹೆಚ್ಚಿನ ಅನುದಾನವನ್ನು ನೀಡುವ ಮೂಲಕ ಪ್ರೋತ್ಸಾಹ ನೀಡುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಆದಿವಾಸಿಗಳು ನಿರಾಸಕ್ತಿ ತೋರುತ್ತಿದ್ದಾರೆ.

ಸಂಘದ ಆಡಳಿತ ಮಂಡಳಿಯು ಅರಣ್ಯಗಳಿಂದ ಕಿರು ಉತ್ಪನ್ನಗಳನ್ನು ತರುವ ಆದಿವಾಸಿಗಳಿಗೆ ಮುಂಗಡ ಹಣದೊಂದಿಗೆ ಸಹಕಾರ ನೀಡುತ್ತಿದ್ದವು. ಇದರಿಂದ ಅರಣ್ಯದಲ್ಲಿ ಕಾಲಕಾಲಕ್ಕೆ ಸಿಗುವ ಕಿರು ಉತ್ಪನ್ನಗಳನ್ನು ಆದಿವಾಸಿಗಳು ಕಿತ್ತು ತರುವ ಮೂಲಕ ತಮ್ಮ ವ್ಯಾಪ್ತಿಯ ಲ್ಯಾಂಪ್ಸ್ಗಳಿಗೆ ನೀಡಿ ತಮ್ಮ ಆದಾಯವನ್ನು ವೃದ್ಧಿಸಿಕೊಳ್ಳುತ್ತಿದ್ದವು.

ಇತ್ತೀಚಿನ ದಿನದಲ್ಲಿ ಅರಣ್ಯ ಇಲಾಖೆಯು ಹಲವು ಮಾರ್ಪಾಡುಗಳನ್ನು, ಸುತ್ತೋಲೆಗಳನ್ನು ಹೊರಡಿಸುವ ಮೂಲಕ ಅರಣ್ಯ ಪ್ರವೇಶ ಮಾಡಲು ಆದಿವಾಸಿಗಳಿಗೆ ಹಲವು ನಿಬಂಧನೆಗಳನ್ನು ಒಡ್ಡಿದೆ. ಇದರಿಂದಾಗಿ ಅರಣ್ಯ ಪ್ರದೇಶಕ್ಕೆ ತೆರಳಲು ಗಿರಿಜನರಿಗೆ ಸಾಧ್ಯವಾಗುತ್ತಿಲ್ಲ. ಅರಣ್ಯದಲ್ಲಿರುವ ಕಿರು ಉತ್ಪನ್ನಗಳಾದ ಬೃಹತ್ ಮರಗಳಲ್ಲಿ ಕಟ್ಟುವ ಹೆಜ್ಜೇನಿನ ಜೇನು ತುಪ್ಪ, ಹುತ್ತದಲ್ಲಿ ಸಿಗುವ ಜೇನುತುಪ್ಪ, ಮೂಲಿ ಜೇನು, ಕಡ್ಡಿ ಜೇನು ಸೇರಿದಂತೆ ಮರ ಪಾಚಿ, ಸೀಗೆಕಾಯಿ, ಅಂಟುವಾಳಕಾಯಿ ಹಾಗೂ ದಾಲ್ಚಿನ್ನಿ ಪದಾರ್ಥದ ಸಂಗ್ರಹ ಕ್ಷಿಣಿಸಿದೆ.

ಆದಿವಾಸಿಗಳು ತರುವ ಅರಣ್ಯ ಉತ್ಪನ್ನಗಳಿಂದ ಸೊಸೈಟಿಗಳಲ್ಲಿಯೇ ಶುದ್ಧೀಕರಿಸಿ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸುತ್ತಿದ್ದರು. ಇದರಿಂದ ಬಹುತೇಕ ಆದಾಯವು ಸಂಘಗಳಿಗೆ ಲಭ್ಯವಾಗುತ್ತಿದ್ದವು. ಕರ್ನಾಟಕ ರಾಜ್ಯದಲ್ಲಿ ಆದಿವಾಸಿಗಳ ಏಳಿಗೆಗಾಗಿ ಕೊಡಗು ಸೇರಿದಂತೆ ಇತರ ಜಿಲ್ಲೆಗಳಲ್ಲಿ ೨೭ ಗಿರಿಜನರ ದೊಡ್ಡ ಪ್ರಮಾಣದ ವಿವಿದ್ದೋದ್ದೇಶ ಸಹಕಾರ ಸಂಘಗಳು ಅಸ್ತಿತ್ವಕ್ಕೆ ಬಂದಿವೆ. ಇವುಗಳನ್ನು ಮೈಸೂರಿನ ರಾಜ್ಯಮಟ್ಟದ ಮಹಾಮಂಡಲವು ನಿರ್ವಹಣೆ ಮಾಡುತ್ತಿದೆ. ಸಂಘಕ್ಕೆ ಬೇಕಾದ ಸಂಪನ್ಮೂಲಗಳನ್ನು ಮಹಾಮಂಡಲವು ಸಾಲದ ರೂಪದಲ್ಲಿ ಶೂನ್ಯ ಬಡ್ಡಿ ರೂಪದಲ್ಲಿ ಸಂಘಗಳಿಗೆ ನೀಡುವ ಮೂಲಕ ಅವುಗಳ ಅಭಿವೃದ್ಧಿಗೆ ಕೈಜೋಡಿಸುತ್ತಿವೆ.

(ಮೊದಲ ಪುಟದಿಂದ) ಕೊಡಗಿನಲ್ಲಿ ಗಿರಿಜನರ ವಿವಿದ್ಧೋದ್ದೇಶ ಸಹಕಾರ ಸಂಘವು ಭಾಗಮಂಡಲ, ಬಸವನಹಳ್ಳಿ ಹಾಗೂ ತಿತಿಮತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ತಿತಿಮತಿ ಭಾಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಗಿರಿಜನರು ಅರಣ್ಯ ಹಾಗೂ ಅರಣ್ಯದ ಅಂಚಿನಲ್ಲಿ ವಾಸವಿದ್ದಾರೆ. ಇವರಿಗೆ ಅರಣ್ಯದಲ್ಲಿ ಸಿಗುವ ಕಿರು ಉತ್ಪನ್ನಗಳನ್ನು ತೆಗೆದುಕೊಳ್ಳುವ ಅವಕಾಶ ಲಭಿಸಿದೆ. ಇತ್ತೀಚೆಗೆ ಅರಣ್ಯ ಇಲಾಖೆಯ ಕಠಿಣ ಆದೇಶಗಳಿಂದ ಅರಣ್ಯಕ್ಕೆ ಪ್ರವೇಶ ಮಾಡಲು ಹಲವು ನಿಬಂಧನೆಗಳನ್ನು ಅರಣ್ಯ ಇಲಾಖೆ ವಿಧಿಸಿದೆ. ಅರಣ್ಯಕ್ಕೆ ತೆರಳಿ ಉತ್ಪನ್ನಗಳನ್ನು ಕೀಳುವ ಆದಿವಾಸಿಗಳಿಗೆ ಇಲಾಖೆ ವತಿಯಿಂದ ಗುರುತಿನ ಚೀಟಿಯನ್ನು ನೀಡುತ್ತಿದೆ. ನಿಗದಿತ ಸಮಯದಲ್ಲಿ ಮಾತ್ರ ಅರಣ್ಯಕ್ಕೆ ಪ್ರವೇಶ ಮಾಡಲು ಅವಕಾಶ ಕಲ್ಪಿಸಿದೆ. ಇದರಿಂದಾಗಿ ಆದಿವಾಸಿಗಳು ತಮಗೆ ಬೇಕಾದ ಸಮಯದಲ್ಲಿ ಅರಣ್ಯಕ್ಕೆ ಪ್ರವೇಶ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಬಹುತೇಕ ಆದಿವಾಸಿಗಳು ಕಿರು ಉತ್ಪನ್ನಗಳನ್ನು ಅರಣ್ಯದಿಂದ ಕಿತ್ತು ತರುವ ಕೆಲಸಕ್ಕೆ ಮುಂದಾಗುತ್ತಿಲ್ಲ. ಇದರ ಪರಿಣಾಮವಾಗಿ ಗಿರಿಜನರ ದೊಡ್ಡ ಪ್ರಮಾಣದ ವಿವಿದ್ಧೋದ್ದೇಶ ಸಹಕಾರ ಸಂಘಕ್ಕೆ ಆದಾಯ ಇಳಿಮುಖಗೊಂಡಿದ್ದು ಮುಂದಿನ ಭವಿಷ್ಯ ಡೋಲಾಯಮಾನ ಸ್ಥಿತಿ ತಲುಪಿದರೂ ಅಚ್ಚರಿಯಿಲ್ಲ.

ಅರಣ್ಯದಲ್ಲಿರುವ ಕಿರು ಉತ್ಪನ್ನಗಳ ಮಾರಾಟದಿಂದಲೇ ಅಭಿವೃದ್ಧಿಯತ್ತ ಸಾಗುತ್ತಿದ್ದ ಗಿರಿಜನರ ದೊಡ್ಡ ಪ್ರಮಾಣದ ವಿವಿದ್ಧೋದ್ದೇಶ ಸಹಕಾರ ಸಂಘವು ಇದೀಗ ಉತ್ಪನ್ನಗಳ ಕೊರತೆಯನ್ನು ಎದುರಿಸುತ್ತಿದೆ. ಲ್ಯಾಂಪ್ಸ್ ಸಹಕಾರ ಸಂಘದಲ್ಲಿ ಸಾವಿರಾರು ಮಂದಿ ಆದಿವಾಸಿಗಳು ಸದಸ್ಯರಾಗಿದ್ದಾರೆ. ಸದಸ್ಯರ ಹಿತ ಕಾಪಾಡಲು ಸಂಘವು ಹಲವು ಕ್ರಮ ಕೈಗೊಂಡರೂ ಅರಣ್ಯದಿಂದ ಬರುವ ಕಿರು ಉತ್ಪನ್ನಗಳು ಕಡಿಮೆಯಾಗಿರುವುದರಿಂದ ಸಂಸ್ಥೆಯು ನಷ್ಟದ ಹಾದಿಯತ್ತ ಸಾಗುತ್ತಿದೆ. ಮಹಾಮಂಡಲವು ಸಂಘದ ಅಭಿವೃದ್ಧಿಗೆ ಸಾಕಷ್ಟು ಪ್ರಮಾಣದಲ್ಲಿ ಶೂನ್ಯ ಬಡ್ಡಿ ರೂಪದಲ್ಲಿ ಸಾಲ ಮಂಜೂರು ಮಾಡಿದಲ್ಲಿ ಸಂಘದ ಬೆಳವಣಿಗೆಗೆ ಸಹಾಯಕವಾಗಲಿದೆ.