ಸೋಮವಾರಪೇಟೆ,ಫೆ.೨೭: ಸಮೀಪದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರುತ್ತಿದ್ದು, ಜನತೆಯಲ್ಲಿ ಭಯಾತಂಕ ಉಂಟುಮಾಡಿರುವುದು ಒಂದೆಡೆಯಾದರೆ, ಕೃಷಿ ಫಸಲು ಸಹ ಕಾಡಾನೆಗಳಿಗೆ ಆಹಾರವಾಗುವ ಮೂಲಕ ಕೃಷಿಕರು ನಷ್ಟ ಅನುಭವಿಸುವಂತಾಗಿದೆ. ಕಳೆದ ಕೆಲ ದಿನಗಳಿಂದ ಐಗೂರು, ಕಾಜೂರು, ಯಡವಾರೆ ಸುತ್ತಮುತ್ತಲಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು, ಜನವಸತಿ ಹಾಗೂ ಕೃಷಿ ಪ್ರದೇಶಕ್ಕೆ ತೆರಳಿ ಮನಸೋಯಿಚ್ಛೆ ದಾಂಧಲೆ ನಡೆಸುತ್ತಿವೆ.

ಐಗೂರು ಗ್ರಾಮದ ಎಂ.ಎಲ್. ರಾಜು ಅವರಿಗೆ ಸೇರಿದ ೫ ಎಕರೆ ಗದ್ದೆಯಲ್ಲಿ ದಿನೇಶ್ ಎಂಬವರು ಭತ್ತದ ಕೃಷಿ ಕೈಗೊಂಡಿದ್ದು, ನಾಟಿ ಕಾರ್ಯ ವಿಳಂಬವಾದ್ದರಿAದ ಕಟಾವು ಮಾಡಲು ತಡವಾಗಿತ್ತು. ಕಳೆದ ಮೂರು ದಿನಗಳಿಂದ ಕಟಾವು ಮಾಡಿದ್ದ ಭತ್ತದ ಮೆದೆಗಳನ್ನು ಗದ್ದೆಯಲ್ಲಿಯೇ ಜೋಡಿಸಿ ಇಟ್ಟು ಹಲ್ಲರ್ ಮಾಡಲು ಕಾಯುತ್ತಿದ್ದರು.

ಈ ಮಧ್ಯೆ ನಿನ್ನೆ ರಾತ್ರಿ ಗದ್ದೆಗೆ ಆಗಮಿಸಿರುವ ಕಾಡಾನೆಗಳ ಹಿಂಡು ಶೇಖರಿಸಿಟ್ಟಿದ್ದ ಭತ್ತದ ಮೆದೆಗಳನ್ನು ಮನಸೋಯಿಚ್ಛೆ ಎಳೆದು, ತಿಂದು ನಷ್ಟಪಡಿಸಿವೆ. ಇದರೊಂದಿಗೆ ಭತ್ತದ ಫಸಲು ಇರುವ ಮೆದೆಗಳನ್ನು ಚೆಲ್ಲಾಪಿಲ್ಲಿ ಮಾಡುವ ಮೂಲಕ ಕೃಷಿಕನ ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತೆ ಮಾಡಿವೆ. ಇದರಿಂದಾಗಿ ದಿನೇಶ್ ಅವರಿಗೆ ಕನಿಷ್ಟವೆಂದರೂ ೧ ಲಕ್ಷದಷ್ಟು ನಷ್ಟ ಸಂಭವಿಸಿದೆ. ಸ್ಥಳಕ್ಕೆ ಅರಣ್ಯಾಧಿಕಾರಿ ಜಗದೀಶ್, ಅರಣ್ಯ ರಕ್ಷಕ ಭ್ರಮರಪ್ಪ, ಟಾಸ್ಕ್ಫೋರ್ಸ್ನ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇಂದು ಹಗಲಿನ ವೇಳೆಯಲ್ಲೂ ಕಾಡಾನೆಗಳು ಐಗೂರು-ಕಾಜೂರು ವ್ಯಾಪ್ತಿಯಲ್ಲಿ ಸಂಚರಿಸಿವೆ. ಅರಣ್ಯದಲ್ಲಿ ಆಹಾರ ಮತ್ತು ನೀರಿನ ಕೊರತೆಯಿರುವುದರಿಂದ ಕಾಡಾನೆಗಳು ಗ್ರಾಮಕ್ಕೆ ಲಗ್ಗೆಯಿಡುತ್ತಿವೆ. ಇದರೊಂದಿಗೆ ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ. ಕಂದಕ ನಿರ್ಮಾಣವೂ ಸಮರ್ಪಕವಾಗಿಲ್ಲ. ಅರಣ್ಯ ಇಲಾಖೆ ತಕ್ಷಣ ಈ ಬಗ್ಗೆ ಗಮನಹರಿಸಬೇಕು. ಅರಣ್ಯದಲ್ಲಿ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡಬೇಕು. ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಿ ಬ್ಯಾರಿಕೇಡ್ ಹಾಗೂ ಕಂದಕ ಕಾಮಗಾರಿ ಪೂರ್ಣಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.