ಸೋಮವಾರಪೇಟೆ, ಫೆ.೨೭ : ಕಾಫಿ ತೋಟಕ್ಕೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಹಾನಿಯಾಗಿರುವ ಘಟನೆ ಕಿರಗಂದೂರು ಗ್ರಾಮದಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ. ಬಡಗಿಮನೆ ಬಿ.ಎನ್.ಚಂದ್ರ, ಗಿರಿಜಮ್ಮ ಎಂಬವರ ಕಾಫಿ ತೋಟಕ್ಕೆ ಬೆಂಕಿ ಬಿದ್ದಿದ್ದು, ಗ್ರಾಮಸ್ಥರು ಬೆಂಕಿ ಆರಿಸಿದ್ದಾರೆ. ಫಸಲು ಕೊಡುತ್ತಿದ್ದ ೨೦೦ ಕಾಫಿ ಗಿಡಗಳು, ೩೦ ಮೆಣಸಿನ ಬಳ್ಳಿ, ಹತ್ತು ಸಿಲ್ವರ್ ಮರಗಳು ಬೆಂಕಿಗಾಹುತಿಯಾಗಿವೆ. ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಪರಿಹಾರಕ್ಕಾಗಿ ತೋಟಗಾರಿಕಾ ಇಲಾಖೆ ಮತ್ತು ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ.