ಪೊನ್ನಂಪೇಟೆ, ಫೆ. ೨೫: ಪೊನ್ನಂಪೇಟೆ ತಾಲೂಕಿನ ಕಾನೂರು ಸಮೀಪ ಬ್ರಹ್ಮಗಿರಿ ಚೈನ್‌ಗೇಟ್‌ನಲ್ಲಿ ಹಾಡಹಗಲೆ ರಸ್ತೆಯಲ್ಲಿ ಹುಲಿಯೊಂದು ನಡೆದುಕೊಂಡು ಹೋಗುತ್ತಿರುವ ದೃಶ್ಯವನ್ನು ಆ ಮಾರ್ಗದಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ನಿಟ್ಟೂರು ಗ್ರಾಮದ ಜೀವನ್ ಎಂಬವರು ಹುಲಿಯು ರಸ್ತೆ ದಾಟಿ ಮರೆಯಾಗುತ್ತಿರುವುದನ್ನು ನೋಡಿರುವುದಾಗಿ "ಶಕ್ತಿ"ಗೆ ಮಾಹಿತಿ ನೀಡಿದ್ದಾರೆ. ಕಳೆದ ಮೂರು ದಿನಗಳಿಂದ ಕಿರಗೂರು ಗ್ರಾಮದಲ್ಲಿ ಕಾಣಿಸಿಕೊಂಡಿದ್ದ ಹುಲಿಯ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿರುವ ಬೆನ್ನಲ್ಲೇ, ಹುಲಿಯೊಂದು ರಸ್ತೆಯಲ್ಲಿ ಕಾಣಿಸಿಕೊಂಡಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಹುಲಿಯ ಭಯದಿಂದ ಕಾರ್ಮಿಕರು ತೋಟಗಳಿಗೆ ತೆರಳಲು ಹಿಂದೇಟು

(ಮೊದಲ ಪುಟದಿಂದ) ಹಾಕುತ್ತಿದ್ದು, ಕಾಫಿ, ಕರಿಮೆಣಸು ಕೆಲಸ ಇನ್ನೂ ಪೂರ್ಣಗೊಳ್ಳದೆ ಇರುವ ಬೆಳೆಗಾರ ಸಂಕಷ್ಟಕ್ಕೊಳಗಾಗುವ ಪರಿಸ್ಥಿತಿ ಎದುರಾಗಿದೆ. ಕಾಫಿ ಕೊಯ್ಲು ಮುಗಿಸಿರುವವರು, ತೋಟಗಳಿಗೆ ನೀರು ಹಾಯಿಸಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದಷ್ಟು ಬೇಗ ಅರಣ್ಯ ಇಲಾಖೆ ನಾಡಿಗೆ ಬಂದಿರುವ ಹುಲಿಯನ್ನು ಸೆರೆಹಿಡಿದು ಆತಂಕವನ್ನು ದೂರ ಮಾಡುವಂತೆ ಸಾರ್ವಜನಿಕರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.