ಸೋಮವಾರಪೇಟೆ, ಫೆ. ೨೬: ಸಮೀಪದ ಯಡವಾರೆ ಗ್ರಾಮದಲ್ಲಿ ಅಶೋಕ್ ಅವರ ಕಾಫಿ ತೋಟಕ್ಕೆ ಆನೆ ಹಿಂಡು ದಾಳಿ ನಡೆಸಿದ ಹಿನ್ನೆಲೆಯಲ್ಲಿ ಭಯಭೀತರಾದ ಕಾರ್ಮಿಕರು ದಿಕ್ಕಾಪಾಲಾಗಿ ಓಡಿ ಪ್ರಾಣ ಉಳಿಸಿಕೊಂಡ ಘಟನೆ ನಡೆದಿದೆ.
ಕಾರ್ಮಿಕರು ಕಾಫಿಕೊಯ್ಯುತ್ತಿದ್ದ ಸಂದರ್ಭ ನಿನ್ನೆ ಸುಮಾರು ಮೂರು ಗಂಟೆ ಸಮಯದಲ್ಲಿ ಕಾಡಾನೆಗಳ ಹಿಂಡು ಕಾಫಿತೋಟಕ್ಕೆ ಲಗ್ಗೆ ಇಟ್ಟಿವೆ. ಇದರಿಂದ ಕಂಗೆಟ್ಟ ಕಾರ್ಮಿಕರು ಓಡಿ ಜೀವ ಉಳಿಸಿಕೊಂಡಿದ್ದಾರೆ. ಕಾಫಿ ತೋಟದ ಮಾಲೀಕರಾದ ಮಚ್ಚಂಡ ಅಶೋಕ್ ಅವರು ಅರಣ್ಯ ಇಲಾಖೆಗೆ ವಿಷಯ ತಿಳಿಸಿದ ಮೇರೆಗೆ ಸ್ಥಳಕ್ಕೆ ಆಗಮಿಸಿದ ಆನೆ ಕಾರ್ಯಾಚರಣೆ ಪಡೆ ಸಿಬ್ಬಂದಿಗಳು ಪಟಾಕಿ ಸಿಡಿಸಿ ಕಾಡಾನೆಗಳನ್ನು ಕಾಡಿಗಟ್ಟಲು ಶ್ರಮಿಸಿದ್ದಾರೆ.
ಕಾಫಿ ತೋಟದ ಮಾಲೀಕರು, ತೋಟದಲ್ಲಿದ್ದ ಕಾಫಿಯನ್ನು ಸಾಗಿಸಲಾಗದೆ ಇಂದು ಬೆಳಿಗ್ಗೆ ಬಂದು ನೋಡಿದಾಗ ಕಾಡಾನೆಗಳ ಹಿಂಡು ಸುಮಾರು ೧೫ ಕಾಫಿ ಗಿಡ ಮುರಿದು, ಸುಮಾರು ೫೦ ಚೀಲದಷ್ಟು ಕಾಫಿ ಮೂಟೆಗಳನ್ನು ಎಸೆದು ನಾಶಪಡಿಸಿವೆ. ಇದರಿಂದ ತೋಟದ ಮಾಲೀಕರಿಗೆ ಸುಮಾರು ೭೦ ಸಾವಿರ ರೂಪಾಯಿಗಳ ನಷ್ಟ ಸಂಭವಿಸಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳಾದ ಜಗದೀಶ್, ಸಿಬ್ಬಂದಿಗಳು ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. ಈ ಸಂದರ್ಭ ತೋಟದ ಮಾಲೀಕ ಅಶೋಕ್ ಮಾತನಾಡಿ, ಈ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಆನೆ ಕಾರ್ಯಪಡೆಗೆ ಇಲಾಖೆಯಿಂದ ಪ್ರತ್ಯೇಕ ವಾಹನಗಳಿಲ್ಲದ ಕಾರಣ ಅವರಿಗೆ ಸುದ್ದಿ ಮುಟ್ಟಿದ ತಕ್ಷಣ ಘಟನಾ ಸ್ಥಳಕ್ಕೆ ಬರಲು ಸಾಧ್ಯವಿಲ್ಲ. ಅರಣ್ಯ ಇಲಾಖೆಯವರು ಇನ್ನಾದರೂ ಎಚ್ಚೆತ್ತುಕೊಂಡು ಆನೆ ಕಾರ್ಯಪಡೆಗೆ ಒಂದು ವಾಹನವನ್ನು ನಿಯೋಜನೆ ಮಾಡಬೇಕೆಂದು ಮನವಿ ಮಾಡಿದ್ದಾರೆ. ಅಲ್ಲದೆ ಸುಮಾರು ಒಂದು ವರ್ಷದಿಂದ ರೈಲ್ವೆ ಬ್ಯಾರಿಕೇಡ್ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಸಂದರ್ಭ ರೈತ ಸಂಘದ ಸೋಮವಾರಪೇಟೆ ತಾಲೂಕು ಸಂಚಾಲಕರಾದ ಗರಗಂದೂರು ಲಕ್ಷö್ಮಣ್, ರೈತ ಸಂಘದ ಮುಖಂಡರಾದ ಅಡಿಕೇರಿ ಸುಬ್ಬಯ್ಯ, ಅರಣ್ಯ ಇಲಾಖೆ ಅಧಿಕಾರಿ ಜಗದೀಶ್ ಹಾಗೂ ಆನೆ ಕಾರ್ಯಪಡೆ ಸಿಬ್ಬಂದಿಗಳಿದ್ದರು.