ಮಡಿಕೇರಿ, ಫೆ. ೨೬: ನಗರದ ಎ.ಪಿ.ಜೆ. ಅಬ್ದುಲ್ ಕಲಾಂ ಬಡಾವಣೆಯಲ್ಲಿ ಡಾ. ಅಬ್ದುಲ್ ಕಲಾಂ ಸೌಹಾರ್ದ ಸಮಿತಿ ವತಿಯಿಂದ ನಾಲ್ಕನೇ ವರ್ಷದ ಕ್ರೀಡಾಕೂಟ ನಡೆಯಿತು. ದಿನದ ಅಂಗವಾಗಿ ನಡೆದ ವಿವಿಧ ಕ್ರೀಡಾ ಮತ್ತು ಮನರಂಜನಾ ಸ್ಪರ್ಧೆಗಳಲ್ಲಿ ಮಹಿಳೆಯರು, ಪುರುಷರು ಮತ್ತು ಮಕ್ಕಳು ತಲ್ಲೀನರಾಗಿದ್ದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಶಕ್ತಿ ಪತ್ರಿಕೆಯ ಪ್ರಧಾನ ಸಂಪಾದಕರಾದ ಜಿ.ರಾಜೇಂದ್ರ, ನ್ಯಾಯಯುತವಾಗಿ, ಶ್ರಮಜೀವಿಗಳಾಗಿ ಪರಸ್ಪರ ಕಲೆತು, ಜಾತಿ ಧರ್ಮಗಳನ್ನು ವೈಯಕ್ತಿಕವಾಗಿಟ್ಟು ಕೊಂಡು ಬದುಕುವುದೇ ಮನುಷ್ಯಧರ್ಮ ಎಂದರು. ಇಂದು ಬೃಹತ್ ಕಂಪೆನಿಗಳೇ ಸÀಂಕಷ್ಟದಲ್ಲಿದ್ದು, ಐಟಿ ಉದ್ಯಮಗಳನ್ನೇ ನಂಬಲಾಗದ ಪರಿಸ್ಥಿತಿಯಿದೆ. ಪದವೀಧರರೇ ಹೊಟೇಲ್‌ಗಳಲ್ಲಿ ದುಡಿಯುವಂತಾಗಿದೆ. ಪರಿಸ್ಥಿತಿ ಹೀಗಿರುವಾಗ ನಿರುದ್ಯೋಗಿಗಳು, ತಕ್ಷಣ ಸಿಕ್ಕ ಉದ್ಯೋಗವನ್ನೋ, ಸ್ವಯಂ ಉದ್ಯೋಗವನ್ನೋ ಆಶ್ರಯಿಸುವುದು ಒಳ್ಳೆಯದು ಎಂದು ರಾಜೇಂದ್ರ ಅವರು ಹೇಳಿದರು. ಕೊಡಗಿನಲ್ಲಿ ಹೊಸ ಉದ್ಯಮಗಳಿಗೆ ವಿಪುಲ ಅವಕಾಶಗಳಿವೆ ಎಂದು ಅವರು ನುಡಿದರು.

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ, ಬಡಾವಣೆಯ ಜನರ ಸಾಮರಸ್ಯ ಮಾದರಿಯಾಗಿದೆ ಎಂದರು. ನೆರೆಮನೆಯಲ್ಲಿ ಏನು ನಡೆಯುತ್ತಿದೆ ಎಂಬುದರ ಪರಿವೇ ಇರದ ಈ ಕಾಲಘಟ್ಟದಲ್ಲಿ, ಬಡಾವಣೆಯ ನಾಗರಿಕರು ಪರಸ್ಪರ ಬಾಂಧವ್ಯದ ಜೀವನ ಸಾಗಿಸುತ್ತಿರುವುದು ಶ್ಲಾಘನೀಯ ಎಂದು ಅವರು ನುಡಿದರು.

ನಗರಸಭಾ ಉಪಾಧ್ಯಕ್ಷೆ ಸವಿತಾ ರಾಕೇಶ್ ಮಾತನಾಡಿ, ಒಂದು ಕಡ್ಡಿಯನ್ನು ಸುಲಭವಾಗಿ ಮುರಿದಂತೆ ಕಡ್ಡಿಗಳ ಕಟ್ಟನ್ನು ಮುರಿಯಲಾಗದು. ಅದೇ ರೀತಿ ಎಲ್ಲರೂ ಒಗ್ಗಟ್ಟಾಗಿರಬೇಕು ಎಂದರು. ನಗರಸಭಾ ಸದಸ್ಯ ಅಮೀನ್ ಮೊಹಿಸಿನ್ ಮಾತನಾಡಿ, ಪ್ರಸ್ತುತ ಸನ್ನಿವೇಶದಲ್ಲಿ ಪರರ ನೋವಿಗೆ ಸ್ಪಂದಿಸುವ ಮನಸ್ಥಿತಿ ಎಲ್ಲರಲ್ಲೂ ಬರಬೇಕಿದೆ ಎಂದು ಹೇಳಿದರು.

ಇದೇ ವೇಳೆ ಬಡಾವಣೆ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ಕ್ರೀಡಾಪಟು ಪಾಡೆಯಂಡ ಮಣಿ ಮೇದಪ್ಪ, ಉದ್ಯಮಿ ಯೂಸುಫ್, ಉರಗ ಪ್ರೇಮಿ ಕುಯ್ಯಮುಡಿ ಯದುಕುಮಾರ್ ಹಾಗೂ ನಗರಸಭಾ ಪೌರ ಸಿಬ್ಬಂದಿ ಅಬ್ದುಲ್ ಅಜೀಜ್ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕ್ರೀಡಾಸ್ಪರ್ಧೆಗಳಲ್ಲಿ ವಿಜೇತರಿಗೆ ಅತಿಥಿಗಳು ಬಹುಮಾನ ವಿತರಿಸಿದರು.

ಸಮಿತಿ ಅಧ್ಯಕ್ಷ ಎಂ.ಎ. ಸಾದಿಕ್, ಉಪಾಧ್ಯಕ್ಷ ಟಿ.ಆರ್. ಜೀವನ್, ಕೌಸರ್, ಬೈಶ್ರೀ ಪ್ರಕಾಶ್ ಮತ್ತಿತರರು ಹಾಜರಿದ್ದರು. ಸಮಾರಂಭದ ಬಳಿಕ ವಿಕ್ರಂ ಜಾದೂಗಾರ್ ಅವರಿಂದ ಮ್ಯಾಜಿಕ್ ಪ್ರದರ್ಶನ ನಡೆಯಿತು.