ಸೋಮವಾರಪೇಟೆ, ಫೆ. ೨೫: ಸಮೀಪದ ಯಡೂರು ವೈಸಿಸಿ ಕ್ರಿಕೆಟ್ ಕ್ಲಬ್ ವತಿಯಿಂದ ಬಿಟಿಸಿಜಿ ಕಾಲೇಜು ಮೈದಾನದಲ್ಲಿ ನಡೆದ ೨೩ನೇ ವರ್ಷದ ಕ್ರಿಕೆಟ್ ಪಂದ್ಯಾಟದಲ್ಲಿ ಟೀಂ ಹೆಚ್.ಡಿ.ಕೆ. ತಂಡವು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಫೈನಲ್ ಪಂದ್ಯದಲ್ಲಿ ಟೀಂ ಆರ್.ಆರ್. ತಂಡವನ್ನು ಮಣಿಸುವ ಮೂಲಕ ಟೀಂ ಹೆಚ್‌ಡಿಕೆ ತಂಡವು ಪ್ರಥಮ ಸ್ಥಾನ ಪಡೆಯಿತು. ಆರ್.ಆರ್. ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ವಿಜೇತ ತಂಡಗಳಿಗೆ ಪ್ರಥಮ ಬಹುಮಾನವಾಗಿ ೨೨,೨೨೨ ನಗದು ಸೇರಿದಂತೆ ಟ್ರೋಫಿ, ದ್ವಿತೀಯ ಬಹುಮಾನ ೧೧,೧೧೧ ನಗದು ಸೇರಿದಂತೆ ಟ್ರೋಫಿ ವಿತರಿಸಲಾಯಿತು.

ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಶಾಸಕ ಅಪ್ಪಚ್ಚು ರಂಜನ್, ಕಾಂಗ್ರೆಸ್ ಮುಖಂಡ ಹರಪಳ್ಳಿ ರವೀಂದ್ರ, ಗ್ರಾ.ಪಂ. ಸದಸ್ಯ ಡಿ.ಎಸ್. ಸುರೇಶ್, ಚೌಡ್ಲು ವಿಎಸ್‌ಎಸ್‌ಎನ್ ನಿರ್ದೇಶಕ ವೈ.ಎಂ. ನಾಗರಾಜು, ಪ್ರಮುಖರಾದ ಸಿ.ಡಿ. ಪ್ರವೀಣ್, ಡಿ.ಜಿ. ಮಹೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ವೈಸಿಸಿ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಸಿ.ಎಂ. ಸುರೇಶ್ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ಸಿ.ಎಂ. ಪ್ರದೀಪ್ ಮತ್ತು ಯಡೂರು ಬಿಟಿಸಿಜಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಹೆಚ್.ಎನ್. ರಾಜು ಅವರುಗಳನ್ನು ಸನ್ಮಾನಿಸಲಾಯಿತು.