ಮಡಿಕೇರಿ, ಫೆ. ೨೫: ಕರ್ನಾಟಕ ದಲ್ಲಿ ವಾಣಿಜ್ಯದಲ್ಲಿ ಎರಡು ಡಾಕ್ಟರೇಟ್ ಪದವಿಯನ್ನು ಪಡೆದ ಪ್ರಥಮ ಮಹಿಳೆ ಎಂಬ ಕೀರ್ತಿಗೆ ಜಿಲ್ಲೆಯವರಾದ ತೀತರಮಾಡ ಡಾ. ದೇವಕಿ ಅವರು ಪಾತ್ರರಾಗಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದಿಂದ ಕರ್ನಾಟಕದಲ್ಲಿ ಉದ್ಯಮಶೀಲತೆಯ ಸುಸ್ಥಿರ ಅಭಿವೃದ್ಧಿಯ ಮೇಲೆ ರುಡ್ಸೆಟ್ ತರಬೇತಿಯ ಪರಿಣಾಮ ಎಂಬ ಮಹಾ ಪ್ರಬಂಧದಲ್ಲಿ ಎಚ್.ಆರ್.ಎಂ. ವಾಣಿಜ್ಯ ವಿಭಾಗದಲ್ಲಿ ಡಾಕ್ಟರೇಟ್ (ಪಿ.ಎಚ್.ಡಿ.) ಪದವಿಯನ್ನು ಇವರು ಪ್ರಸ್ತುತ ಪಡೆದುಕೊಂಡಿದ್ದಾರೆ.
ಇವರಿಗೆ ಡಾ. ಎಸ್. ಶಂಕರಪ್ಪ ವಿಶ್ರಾಂತ ಪ್ರಾಂಶುಪಾಲರು ಜೆ.ಎಸ್.ಎಸ್. ಸಂಶೋಧನಾ ಸಂಸ್ಥೆ ಮೈಸೂರು ಇವರು ಮಾರ್ಗದರ್ಶನ ನೀಡಿದ್ದಾರೆ. ಈ ಹಿಂದೆ ಇವರು ೨೦೧೭ರಲ್ಲಿ ಮೊದಲ ಡಾಕ್ಟರೇಟ್ ಪದವಿ ಗಳಿಸಿದ್ದರು. ದ್ರಾವಿಡ ವಿಶ್ವ ವಿದ್ಯಾನಿಲಯ ಕುಪ್ಪಂನಿAದ ಗ್ರಾಹಕರ ನಡಾವಳಿಕೆಯ ಮೌಲ್ಯಮಾಪನ - ಕರ್ನಾಟಕದ ವಿಶೇಷ ಉಲ್ಲೇಖ ದೊಂದಿಗೆ ‘ಕೆಫೆ ಕಾಫಿ ಡೇ ಕೇಸ್ ಸ್ಟಡಿ’ ಎಂಬ ವಿಷಯದಲ್ಲಿ ಆ ಸಂದರ್ಭದಲ್ಲಿ ಇವರು ಮಂಡಿಸಿದ್ದ ಮಹಾಪ್ರಬಂಧಕ್ಕೆ ೨೦೧೭ರಲ್ಲಿ ಪ್ರಥಮ ಬಾರಿಗೆ ಪಿ.ಎಚ್.ಡಿ. ಪದವಿ ಲಭ್ಯವಾಗಿತ್ತು. ಪ್ರಸ್ತುತ ಡಾ. ದೇವಕಿ ಅವರು ಎಂ.ಎA.ಕೆ. ಮತ್ತು ಎಸ್.ಡಿ.ಎಂ. ಮಹಿಳಾ ಮಹಾವಿದ್ಯಾಲಯ ಮೈಸೂರು, ಇಲ್ಲಿ ಸ್ನಾತಕೋತ್ತರ ವಾಣಿಜ್ಯ ವಿಭಾಗದಲ್ಲಿ ಮುಖ್ಯಸ್ಥರು ಮತ್ತು ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಲ್ಲೂರು ಗ್ರಾಮದ ತೀತರಮಾಡ ಕೆ. ರಾಜಾ ಅವರ ಪತ್ನಿಯಾಗಿರುವ ಇವರು ಕೊಳ್ಳಿಮಾಡ ಎಂ. ಕುಶಾಲಪ್ಪ ಮತ್ತು ಕೊಳ್ಳಿಮಾಡ ಕೆ. ಕಾವೇರಮ್ಮ ದಂಪತಿ ಪುತ್ರಿಯಾಗಿದ್ದಾರೆ.