ಮಡಿಕೇರಿ, ಫೆ. ೨೫: ಕಾಫಿ ಮಂಡಳಿ ಅರ್ವತ್ತೋಕ್ಲುವಿನಲ್ಲಿ ಸುಸಜ್ಜಿತವಾದ ಮಣ್ಣು ಪರೀಕ್ಷಾ ಪ್ರಯೋಗಾಲಯವನ್ನು ಸ್ಥಾಪಿಸಲಾಗಿದೆ. ಈ ಸೌಲಭ್ಯವು ಕೊಡಗು ಜಿಲ್ಲೆಯ ದಕ್ಷಿಣ ಭಾಗದ ಶ್ರೀಮಂಗಲ, ವೀರಾಜಪೇಟೆ, ಸಿದ್ದಾಪುರ, ಗೋಣಿಕೊಪ್ಪಲು ಹಾಗೂ ಬಾಳೆಲೆ ಪ್ರದೇಶಗಳ ಕಾಫಿ ಬೆಳೆಗಾರರಿಗೆ ಸಹಾಯ ವಾಗುತ್ತದೆ. ಕೊಡಗು ಜಿಲ್ಲೆಯ ದಕ್ಷಿಣ ಭಾಗದ ಎಲ್ಲಾ ಕಾಫಿ ಬೆಳೆಗಾರರು ತಮ್ಮ ತೋಟಗಳ ಮಣ್ಣಿನ ಮಾದರಿಗಳನ್ನು ಪರೀಕ್ಷೆ ಮಾಡಿಸಿಕೊಳ್ಳಲು ಇದು ಸೂಕ್ತ ಸಮಯವಾಗಿದೆ. ಮಣ್ಣಿನ ಪರೀಕ್ಷೆ ಆಧಾರದ ಮೇಲೆ ಶಿಫಾರಸು ಮಾಡಿದ ರಾಸಾಯನಿಕ ಗೊಬ್ಬರ ಬಳಸುವುದರಿಂದ ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಾಗೂ ಅತ್ಯುತ್ತಮ ಕಾಫಿ ಉತ್ಪಾದನೆ ಮಾಡಲು ಸಹಾಯವಾಗುತ್ತದೆ.

ತಮ್ಮ ತೋಟದ ಮಣ್ಣಿನ ಪರೀಕ್ಷೆಯ ಮೌಲ್ಯಗಳ ಆಧಾರದ ಮೇಲೆ ಕಾಫಿ ಮಂಡಳಿಯ ವಿಜ್ಞಾನಿಗಳು ಅತ್ಯುತ್ತಮ ಕಾಫಿ ಉತ್ಪಾದನೆಗೆ ಸೂಕ್ತವಾದ ರಸಗೊಬ್ಬರಗಳ ಬಳಕೆಗೆ ಸಲಹೆ ಮಾಡುತ್ತಾರೆ. ಈ ಸೇವೆಯು ಕಾಫಿ ಬೆಳೆಗಾರರಿಗೆ ರಾಸಾಯನಿಕ ಗೊಬ್ಬರಗಳ ಅಸಮತೋಲನವನ್ನು ತಪ್ಪಿಸಲು ಮತ್ತು ರಾಸಾಯನಿಕ ಗೊಬ್ಬರಗಳ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೆಚ್ಚಿನ ಮಾಹಿತಿಗಾಗಿ ಮಣ್ಣು ಪರೀಕ್ಷಾ ಪ್ರಯೋಗಾಲಯವನ್ನು ಸಂಪರ್ಕ ಮಾಡಬಹುದು. ಡಾ. ಮುಖಾರಿಬ್ ಡಿ.ಎಸ್., ಜೂನಿಯರ್ ಲಯಾಸನ್ ಆಫಿಸರ್, ಗೋಣಿಕೊಪ್ಪಲು. ಮೊ. ೯೪೪೯೦೬೩೦೫೭.