ಮಡಿಕೇರಿ, ಫೆ. ೨೫: ದ್ವಿತೀಯ ಪಿಯುಸಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಸಂತ ಮೈಕಲರ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮೇಜರ್ ಡಾ. ಕುಷ್ವಂತ್ ಕೋಳಿಬೈಲು ಅವರು ಮಾತನಾಡಿ, ಜೀವನದಲ್ಲಿ ಸೋಲುಗಳಿಗೆ ಕುಗ್ಗದೆ ಬದುಕನ್ನು ಮುನ್ನಡೆಸಬೇಕು. ಬದುಕಿನಲ್ಲಿ ಶಾಲಾ-ಕಾಲೇಜಿನ ಪಾತ್ರವಲ್ಲದೆ, ಸ್ವಯಂ ಸಾಧನೆ ಬಲುಮುಖ್ಯ ಎಂದರು. ನಿಮ್ಮ ಮನಸ್ಸಿನಲ್ಲಿರುವ ಗುರಿಗಳನ್ನು ಈಡೇರಿಸಿಕೊಳ್ಳಲು ಸತತ ಸಾಧನೆ ಮಾಡಬೇಕೆಂದರು. ಕಾಲೇಜಿನ ಸಂಚಾಲಕ ಗುರುಗಳಾದ ನವೀನ್ ಕುಮಾರ್ ಅವರು ಮಾತನಾಡಿ, ಆಧುನಿಕತೆಯ ಕಾಲದಲ್ಲಿ ಬದಲಾವಣೆಗೆ ಒಗ್ಗಿಕೊಂಡು ಮಾನವೀಯತೆಯನ್ನು ಉಳಿಸಿಕೊಳ್ಳಬೇಕೆಂದರು. ವೇದಿಕೆಯಲ್ಲಿ ಪ್ರಾಂಶುಪಾಲ ಸುಮಂತ್ ಕೆ.ಯಸ್., ಮುಖ್ಯೋಪಾಧ್ಯಾಯ ಕೆ.ವಿ. ಜಾನ್ಸನ್, ಸಿಸ್ಟರ್ ಪ್ರತಿಮಾ, ಸಿಸ್ಟರ್ ಸರಿತಾ ಇವರುಗಳು ಉಪಸ್ಥಿತರಿದ್ದರು. ಈ ಸಂದರ್ಭ ಮೇಜರ್ ಡಾ. ಕುಷ್ವಂತ್ ಕೋಳಿಬೈಲು ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಅತ್ರೇಯ ಸ್ವಾಗತಿಸಿ, ಫೆಲ್ಸಿಟಾ ಮತ್ತು ಮೊಹಮ್ಮದ್ ಸಾಕಿಬ್ ಅವರು ನಿರೂಪಿಸಿದರು. ಮೇನಿತಾ ನಾಗೇಶ್ ವಂದಿಸಿದರು.