ಗೋಣಿಕೊಪ್ಪ, ಫೆ. ೨೫: ಅರಣ್ಯದಂಚಿನ ರಸ್ತೆ ಅಭಿವೃದ್ದಿ ಹಾಗೂ ಪ್ರವಾಸಿಗರಿಂದ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯು ಕೊಡಗಿನ ಗಡಿ ಭಾಗದಲ್ಲಿ ಅಂತರರಾಜ್ಯ ವಾಹನಗಳಿಂದ ಶುಲ್ಕ ಸಂಗ್ರಹ ಮಾಡಲು ಮುಂದಾಗಿದೆ. ಲಘು ವಾಹÀನಕ್ಕೆ ೨೦ ಹಾಗೂ ಭಾರಿ ವಾಹನಕ್ಕೆ ೫೦ ದರವನ್ನು ನಿಗದಿಪಡಿಸಿದ್ದು ಹೊರ ರಾಜ್ಯಗಳಿಂದ ಬರುವ ವಾಹನಗಳನ್ನು ಗೇಟ್ ಬಳಿ ನಿಲ್ಲಿಸಿ ಇವರಿಂದ ಪ್ರತಿ ವಾಹನಕ್ಕೆ ಶುಲ್ಕವನ್ನು ಸಂಗ್ರಹಿಸಲಾಗುತ್ತಿದೆ.

ಗೇಟ್ ಬಳಿ ವಾಹನಗಳನ್ನು ಅಡ್ಡಗಟ್ಟಿ ನಂತರ ಚೆಕ್ ಪೋಸ್ಟ್ನಲ್ಲಿರುವ ಅರಣ್ಯ ಇಲಾಖೆಯ ಸಿಬ್ಬಂದಿ ಬಳಿ ತೆರಳಿ ನಿಗದಿತ ಶುಲ್ಕವನ್ನು ಪಾವತಿಸಿ ತೆರಳಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಇದರಿಂದ ಬಹುತೇಕ ವಾಹನ ಚಾಲಕರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಪ್ರತಿ ನಿತ್ಯ ತಪಾಸಣಾ ಗೇಟ್‌ಗಳಲ್ಲಿ ವಾದ ವಿವಾದಗಳು ಸಿಬ್ಬಂದಿ ಹಾಗೂ ಚಾಲಕರ ನಡುವೆ ಮಾಮೂಲಿಯಾಗಿದೆ.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗುವ ರಾಜ್ಯ ಮತ್ತು ಜಿಲ್ಲಾ ಹೆದ್ದಾರಿಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಅಂತರರಾಜ್ಯಗಳಿAದ ಹೆಚ್ಚಿನ ವಾಹನಗಳು ಸಂಚರಿಸುತ್ತಿದ್ದು, ರಸ್ತೆಯ ಬದಿಗಳ ಅಭಿವೃದ್ಧಿ ಸ್ವಚ್ಛತೆ ಕಾಪಾಡುವ ಸಲುವಾಗಿ ಅಂತರರಾಜ್ಯಗಳಿAದ ಆಗಮಿಸುವ ವಾಹನಗಳಿಂದ ಪ್ರವೇಶ ಶುಲ್ಕವನ್ನು ಬಾವಲಿ, ನಾಣಚ್ಚಿ, ಉದ್ದೂರು, ಕಾರ್ಮಾಡ್, ಕಲ್ಲಹಟ್ಟಿ, ವೀರನ ಹೊಸಹಳ್ಳಿ ಹಾಗೂ ಆನೆಚೌಕೂರು ತನಿಖಾ ಠಾಣೆಗಳಲ್ಲಿ ಸಂಗ್ರ ಹಿಸಲು ಹಾಗೂ ಪ್ರವಾಸೋದ್ಯಮ ಸ್ಥಳಗಳಾದ ದಮ್ಮನಕಟ್ಟೆ, ನಾಣಚ್ಚಿ, ಪ್ರದೇಶಗಳಲ್ಲಿ ನಿಲುಗಡೆ ಗೊಳ್ಳುವ ವಾಹನಗಳಿಂದ ನಿಲುಗಡೆ ಶುಲ್ಕವನ್ನು ಸಂಗ್ರಹಿಸಲು ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾ ಧಿಕಾರಿಗಳು ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರು ನಿರ್ದೇಶನ ನೀಡಿದ್ದಾರೆ.

(ಮೊದಲ ಪುಟದಿಂದ) ಹಿರಿಯ ಅಧಿಕಾರಿಗಳ ಆದೇಶದಂತೆ ಅಂತರರಾಜ್ಯಗಳಿAದ ಆಗಮಿಸುವ ವಾಹನಗಳಿಂದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗುವ ಅಂತರರಾಜ್ಯಗಳ ವಾಹನಗಳಿಂದ ಶುಲ್ಕ ಹಾಗೂ ವಾಹನ ನಿಲುಗಡೆ ಶುಲ್ಕವನ್ನು ತಾ. ೧ ರಿಂದ ಸಂಗ್ರಹಿಸಲು ಆದೇಶದಲ್ಲಿ ತಿಳಿಸಲಾಗಿದೆ. ಶುಲ್ಕ ಸಂಗ್ರಹಕ್ಕೆ ನಿಗದಿತ ರಶೀದಿಯನ್ನು ಇಲಾಖೆಯ ಸಿಬ್ಬಂದಿಗಳು ವಾಹನ ಚಾಲಕರಿಗೆ ನೀಡುತ್ತಿದ್ದಾರೆ.

ಆನೆಚೌಕೂರು ಗೇಟ್ ಒಂದರಲ್ಲಿಯೇ ಪ್ರತಿನಿತ್ಯ ಸಾವಿರಾರು ಅಂತರರಾಜ್ಯ ವಾಹನಗಳು ಸಂಚರಿಸುತ್ತಿರುವುದರಿAದ ಪ್ರತಿನಿತ್ಯ ಈ ಗೇಟಿನಲ್ಲಿ ೮ ರಿಂದ ೧೦ ಸಾವಿರ ಶುಲ್ಕ ಸಂಗ್ರಹವಾಗುತ್ತಿದೆ ಎಂದು ತಿಳಿದು ಬಂದಿದೆ. ಒಟ್ಟಿನಲ್ಲಿ ಅರಣ್ಯ ಇಲಾಖೆಯು ಶುಲ್ಕ ವಸೂಲಾತಿಗೆ ವಿಶೇಷ ಮಾರ್ಗ ಕಂಡುಕೊAಡಿದ್ದು ವಿರೋಧದ ನಡುವೆಯೇ ಶುಲ್ಕ ಸಂಗ್ರಹದಲ್ಲಿ ತೊಡಗಿದೆ. ಪ್ರತಿ ಗೇಟ್‌ನಲ್ಲಿ ಓರ್ವ ಅರಣ್ಯ ಅಧಿಕಾರಿ ಹಾಗೂ ೨ ಅರಣ್ಯ ಸಿಬ್ಬಂದಿಗಳನ್ನು ಈ ಕಾರ್ಯಕ್ಕೆ ನಿಯೋಜಿಸಿದೆ.

ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಬಿಎನ್‌ಎನ್ ಮೂರ್ತಿ ಅವರ ಪ್ರಕಾರ ನಿರಂತರವಾಗಿ ವನ್ಯಧಾಮ ಪ್ರದೇಶದಲ್ಲಿ ಅಂತರರಾಜ್ಯದಿAದ ಬರುವ ವಾಹನಗಳು ಕಸ ಸುರಿಯುತ್ತಿರುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಗೇಟ್‌ಗಳಲ್ಲಿಯೂ ತಲಾ ಇಬ್ಬರು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ೨೪ ಗಂಟೆ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಅಲ್ಲದೆ ಕರ್ನಾಟಕದ ವಾಹನಗಳು ಆಗಿಂದಾಗ್ಗೆ ಬರುತ್ತಿದ್ದರೆ ತಪಾಸಣೆ ಕೈಗೊಂಡು ಶುಲ್ಕ ವಿಧಿಸಲಾಗುತ್ತದೆ. ಯಾವುದೇ ವಾಹನಗಳು ಈ ಪ್ರದೇಶಗಳಲ್ಲಿ ಛಾಯಾಚಿತ್ರ ತೆಗೆಯುವುದಕ್ಕಾಗಲಿ ಅಥವಾ ಇನ್ಯಾವುದೇ ಕಾರಣಕ್ಕಾಗಲಿ ೧ ಗಂಟೆಗೂ ಅಧಿಕ ತಾಸು ವಾಹನ ನಿಲುಗಡೆಗೊಳಿಸಿದರೆ ರೂ. ೫೦೦ ರಿಂದ ರೂ. ೧ ಸಾವಿರದವರೆಗೆ ದಂಡ ವಸೂಲಿ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ೪ ಸಿಬ್ಬಂದಿಯಿರುವ ಸಂಚಾರಿ ತಂಡವನ್ನು ಅಲ್ಲಲ್ಲಿ ಬಿದ್ದ ಪ್ಲಾಸ್ಟಿಕ್ ಇತ್ಯಾದಿ ವಸ್ತುಗಳನ್ನು ಸಂಗ್ರಹಿಸಲು ಈ ಮೂಲಕ ಪ್ರವಾಸಿಗರನ್ನು ಜಾಗ್ರತಗೊಳಿಸಲು ನಿಯೋಜಿಸಲಾಗುವುದು ಎಂದು ಮಾಹಿತಿಯಿತ್ತರು.

- ಹೆಚ್.ಕೆ. ಜಗದೀಶ್