ಸೋಮವಾರಪೇಟೆ, ಫೆ. ೨೪ : ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ, ಸಾರ್ವಜನಿಕ ಕೆಲಸ ಕಾರ್ಯಗಳನ್ನು ಸುಗಮಗೊಳಿಸಬೇಕಾದ ಜನಪ್ರತಿನಿಧಿಗಳೇ, ಸಾಮಾನ್ಯ ಸಭೆಯಲ್ಲಿ ಅತಿರೇಕದ ವರ್ತನೆ ತೋರುವ ಮೂಲಕ ಸಭೆಯ ಘನತೆಯನ್ನು ಕುಗ್ಗಿಸುವ ಕೆಲಸಕ್ಕೆ ಸಾಕ್ಷಿಯಾದರು.
ಸಂತೆ ಮಾರುಕಟ್ಟೆಯಲ್ಲಿನ ಗದ್ದಲವನ್ನೂ ಮೀರಿಸುವಂತೆ ಇಂದು ನಡೆದ ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆಯು, ಏಕವಚನ ಪದಪ್ರಯೋಗ, ತಳ್ಳಾಟ, ಎಳೆದಾಟದ ಘಟನಾವಳಿಗಳಿಗೆ ಸಾಕ್ಷಿಯಾಯಿತು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು ಅವರ ಅಧ್ಯಕ್ಷತೆಯಲ್ಲಿ ಆಯೋಜನೆಗೊಂಡಿದ್ದ ಸಾಮಾನ್ಯ ಸಭೆಯು ಆರಂಭದಿAದಲೂ ಗೊಂದಲದ ಗೂಡಾಗಿತ್ತು. ೧೧ ಗಂಟೆಗೆ ಸಭೆ ನಿಗದಿಯಾಗಿದ್ದು, ಬಹುತೇಕ ಸದಸ್ಯರು ಸಭಾಂಗಣದಲ್ಲಿ ಆಸೀನರಾಗಿದ್ದರು. ನಿಗದಿತ ಸಮಯಕ್ಕೆ ಸಭೆಗೆ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿ ಆಗಮಿಸಲಿಲ್ಲ.
ಇತ್ತ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗೆ ಕಾದು ಕುಳಿತಿದ್ದ ಸದಸ್ಯರುಗಳ ಸಹನೆಯ ಕಟ್ಟೆಯೂ ಒಡೆದಿತ್ತು. ಉಪಾಧ್ಯಕ್ಷ ಸಂಜೀವ ಅವರು ಸಭೆಯನ್ನು ಬರಕಾಸ್ತು ಮಾಡಲಾಗಿದೆ ಎಂದು ತಿಳಿಸಿದ ನಂತರ ಎಲ್ಲಾ ಸದಸ್ಯರು ಸಭಾಂಗಣದ ಬಾಗಿಲ ಬಳಿ ಬಂದರು.
ಅಷ್ಟರಲ್ಲಿ ಆಗಮಿಸಿದ ಅಧ್ಯಕ್ಷ ಪಿ.ಕೆ. ಚಂದ್ರು ಹಾಗೂ ಮುಖ್ಯಾಧಿಕಾರಿ ನಾಚಪ್ಪ ಅವರು, ತಡವಾಗಿದ್ದಕ್ಕೆ ಕ್ಷಮೆ ಕೇಳಿ ಮತ್ತೆ ಸಭೆ ಮುಂದುವರೆಸಿದರು. ಸಭೆ ಆರಂಭವಾಗುತ್ತಿದ್ದAತೆ ಸದಸ್ಯ ಜೀವನ್ ಅವರು ಪಟ್ಟಣ ಪಂಚಾಯಿತಿ ಕಚೇರಿಯಲ್ಲಿರುವ ಹೆಚ್ಚುವರಿ ಸಿಬ್ಬಂದಿ, ಕುಡಿಯುವ ನೀರಿನ ಸಮಸ್ಯೆ, ತ್ಯಾಜ್ಯ ವಿಲೇವಾರಿ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.
ಇದರೊಂದಿಗೆ ಪಂಚಾಯಿತಿಯ ಅಧ್ಯಕ್ಷರು ಹಾಗೂ ಅಧಿಕಾರಿ ವರ್ಗದವರ ಅಸಹಾಯಕತೆ, ಸಮಸ್ಯೆಗಳನ್ನು ಬಗೆಹರಿಸುವಲ್ಲಿ ನಿರ್ಲಕ್ಷö್ಯತೆ ಇತ್ಯಾದಿ ವಿಷಯಗಳ ಬಗ್ಗೆ ಬೊಟ್ಟು ಮಾಡಿದರು. ಈ ಸಂದರ್ಭ ವಿಪಕ್ಷಗಳ ಇತರ ಸದಸ್ಯರೂ ಸೇರಿದಂತೆ ಆಡಳಿತ ಪಕ್ಷದ ಕೆಲ ಸದಸ್ಯರುಗಳು ದನಿಗೂಡಿಸಿದರು.
ಸಮಸ್ಯೆಗಳ ಬಗ್ಗೆ ತೀವ್ರ ಮಾತುಕತೆ ನಡೆಯುತ್ತಿದ್ದ ಸಂದರ್ಭ ಎದ್ದುನಿಂತಿದ್ದ ಸದಸ್ಯರುಗಳನ್ನು ಕುಳಿತುಕೊಳ್ಳುವಂತೆ ಸೂಚಿಸಲಾಯಿತು. ಆದರೂ ಸದಸ್ಯರು ನಿಂತುಕೊAಡೇ ಆಡಳಿತದ ವಿರುದ್ಧ ಹರಿಹಾಯ್ದರು. ಅಧ್ಯಕ್ಷರು ಮಧ್ಯೆ ಪ್ರವೇಶಿಸಲೂ ಬಿಡದೇ ವಾಗ್ಧಾಳಿ ಮುಂದುವರೆಸಿದರು. ಈ ಸಂದರ್ಭ ಸದಸ್ಯ ಬಿ.ಆರ್. ಮಹೇಶ್ ಅವರು ಎದ್ದುನಿಂತಿದ್ದ ಸದಸ್ಯರುಗಳನ್ನು ಕುರಿತು, ‘ಕೇಳೋದಾದ್ರೆ ಕೇಳಿ ಇಲ್ಲಾಂದ್ರೆ ಸಭೆಯಿಂದ ಹೋಗಿ’ ಎಂದು ಹರಿಹಾಯ್ದರು.
ಈ ಸಂದರ್ಭ ಪಟ್ಟಣ ಪಂಚಾಯಿತಿ ಸಭಾಂಗಣವು ‘ಸೋಮವಾರದಂದು ನಡೆಯುವ ಸಂತೆ ಮಾರುಕಟ್ಟೆ’ಯನ್ನೂ ಮೀರಿಸುವಂತೆ ಬದಲಾಯಿತು. ವಿಪಕ್ಷಗಳ ಸದಸ್ಯರು ಬಿ.ಆರ್. ಮಹೇಶ್ ಸೇರಿದಂತೆ ಆಡಳಿತ ಪಕ್ಷದ ಕೆಲ ಸದಸ್ಯರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಮ್ಮನ್ನು ಹೊರ ನಡೆಯಿರಿ ಎನ್ನಲು ನೀನ್ಯಾರು? ನಾಲಿಗೆ ಮೇಲೆ ಹಿಡಿತವಿರಲಿ.., ಎಂಬಿತ್ಯಾದಿ ಮಾತುಗಳೊಂದಿಗೆ ಏಕವಚನದಲ್ಲೇ ವಾಕ್ಸಮರ ನಡೆಸಿದರು.
ಒಂದು ಹಂತದಲ್ಲಿ ಉಪಾಧ್ಯಕ್ಷ ಬಿ. ಸಂಜೀವ ಅವರು ಕುಳಿತುಕೊಳ್ಳುವ ಚೇರ್‌ನ್ನು ಎತ್ತಿ ಆಕ್ರೋಶ ವ್ಯಕ್ತಪಡಿಸಿದರು. ಇತ್ತ ಸದಸ್ಯ ಶುಭಕರ್ ಹಾಗೂ ಮಹೇಶ್ ನಡುವೆ ತಳ್ಳಾಟ-ಎಳೆದಾಟ ನಡೆಯಿತು. ಇತರ ಸದಸ್ಯರು ಜಗಳ ಬಿಡಿಸುವ ಪ್ರಯತ್ನದಲ್ಲಿದ್ದರು. ಈ ಬಗ್ಗೆ ವಾಗ್ಯುದ್ದ ನಡೆಯುತ್ತಿದ್ದಂತೆ, ಸದಸ್ಯರ ಗೌರವಕ್ಕೆ ಚ್ಯುತಿ ತರುವ ಇಂತಹ ಸಾಮಾನ್ಯ ಸಭೆಗೆ ಯಾವುದೇ ಅರ್ಥವಿಲ್ಲ ಎಂದು ಅಭಿಪ್ರಾಯಿಸಿ ವಿಪಕ್ಷದ ಸದಸ್ಯರುಗಳಾದ ಬಿ. ಸಂಜೀವ, ಶೀಲಾ ಡಿಸೋಜ, ಜೀವನ್, ಬಿ.ಸಿ. ವೆಂಕಟೇಶ್ ಅವರುಗಳು ಸಭೆಯಿಂದ ಹೊರನಡೆದರು.
ಒಟ್ಟಾರೆ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕಾದ ಸದಸ್ಯರು ತಮ್ಮ ಸ್ಥಾನದ ಗೌರವವನ್ನೂ ಮರೆತಂತೆ ವರ್ತಿಸುವ ಮೂಲಕ ಸಾಮಾನ್ಯ ಸಭೆಯ ಘನತೆ ಕಾಪಾಡಲು ವಿಫಲರಾದರು. ವಿಪಕ್ಷ ಸದಸ್ಯರ ಸಭಾ ತ್ಯಾಗದ ನಂತರ ಸಾಮಾನ್ಯ ಸಭೆ ಮುಂದುವರೆಯಿತು.