ನಾಪೋಕ್ಲು, ಫೆ. ೨೪: ಪಟ್ಟಣದ ಬಾಡಿಗೆ ಮನೆ ಒಂದರಲ್ಲಿ ವಾಸವಿದ್ದ ಹೆಚ್.ಕೆ. ಸಂದೀಪ್ (೪೦) ಶುಕ್ರವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೂಲತಃ ಸಕಲೇಶಪುರ ತಾಲೂಕಿನ ಹೆತ್ತೂರು ಹೋಬಳಿ ಹಡ್ಲಹಳ್ಳಿ ಗ್ರಾಮದ ನಿವಾಸಿ ಸಂದೀಪ್ ಕಳೆದ ೨೦ ವರ್ಷಗಳಿಂದ ಪಟ್ಟಣದಲ್ಲಿ ಬಟ್ಟೆ ಮಳಿಗೆ ನಡೆಸುತ್ತಿದ್ದರು.
ವ್ಯಾಪಾರದಲ್ಲಿನ ನಷ್ಟದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕಿಸಲಾಗಿದೆ. ಶುಕ್ರವಾರ ಬೆಳಿಗ್ಗೆ ೭.೩೦ ರ ವೇಳೆಗೆ ಸ್ನೇಹಿತ ಸಂದೇಶ ಅವರಿಗೆ ಕರೆ ಮಾಡಿ ಮನೆಗೆ ಬರುವಂತೆ ತಿಳಿಸಿದ್ದು ಸಂದೇಶ ಮನೆಗೆ ತೆರಳಿದಾಗ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.
ಮೃತ ಸಂದೀಪ್ಗೆ ತಾಯಿ ಮತ್ತು ಒಬ್ಬ ಸಹೋದರ ಇದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಡಿಕೇರಿಗೆ ಕೊಂಡೊಯ್ಯಲಾಗಿದೆ. ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.