ಮಡಿಕೇರಿ, ಫೆ. ೨೪: ಜೆಡಿಎಸ್ ಪಕ್ಷದಲ್ಲಿದ್ದುಕೊಂಡು ಪಕ್ಷವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳುವವರನ್ನು ಅಮಾನತು ಮಾಡಲಾಗುವದೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಕಾರ್ಯಕರ್ತರಾಗಿದ್ದುಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳ ಬಹುದಾಗಿದೆ. ಆದರೂ ಯಾರೂ ಕೂಡ ತಾನೇ ಅಭ್ಯರ್ಥಿ ಎಂದು ಘೋಷಿಸಿಕೊಂಡು ಪ್ರಚುರ ಪಡಿಸುವಂತಿಲ್ಲ. ಈ ಸಂಬAಧ ಕೆಲವರು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಯಾರೇ ಆದರೂ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವದು ತಿಳಿದುಬಂದರೆ ಅಂತಹವರನ್ನು ಅಮಾನತುಗೊಳಿಸಲು ಪಕ್ಷದ ಅಧ್ಯಕ್ಷನಾಗಿ ತನಗೆ ರಾಜ್ಯ ವರಿಷ್ಠರಿಂದ ಜವಾಬ್ದಾರಿಯ ಆದೇಶ ನೀಡಲಾಗಿದೆ. ಜಿಲ್ಲಾ ಸಮಿತಿಗೆ ಎಲ್ಲರೂ ಸಹಕಾರ ನೀಡಬೇಕೆಂದು ಹೇಳಿದರು. ನಾಪಂಡ ಮುತ್ತಪ್ಪ ಅವರಿಗೆ ಸಭೆಗಳನ್ನು ನಡೆಸುತ್ತಿರುವ ಬಗ್ಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ ವಿಚಾರವನ್ನು ಈಗಾಗಲೇ ಪಕ್ಷದ ವರಿಷ್ಠರಿಗೆ ಕಳುಹಿಸಿ ಕೊಡಲಾಗಿದೆ. ಈ ಬಗ್ಗೆ ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದಾರೆಂದು ಗಣೇಶ್ ಹೇಳಿದರು.

ಜೆಡಿಎಸ್‌ನಲ್ಲಿ ಯಾವದೇ ಗೊಂದಲವಿಲ್ಲ, ಪಕ್ಷ ಸಂಘಟನೆ ಯಾಗುತ್ತಿದೆ. ಎರಡು ಕ್ಷೇತ್ರಗಳಿಂದಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವದು. ಆಕಾಂಕ್ಷಿಗಳು ಬಹಳಷ್ಟಿದ್ದು, ಈ ಬಾರಿ ಅಲ್ಪಸಂಖ್ಯಾತರು ಹೆಚ್ಚಿಗೆ ಇರುವ ವೀರಾಜಪೇಟೆ

(ಮೊದಲ ಪುಟದಿಂದ) ಕ್ಷೇತ್ರದಿಂದ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಇಳಿಸಲಾಗುವದು. ಜಾತ್ಯತೀತ ಪಕ್ಷವೆಂದು ಹೇಳಿಕೊಳ್ಳುವ ಕಾಂಗ್ರೆಸ್ ಇದುವರೆಗೆ ಅಲ್ಪಸಂಖ್ಯಾತರಿಗೆ ಅವಕಾಶ ನೀಡಿಲ್ಲ. ಅವರು ಈ ಬಾರಿ ಅವಕಾಶ ನೀಡಿದ್ದಲ್ಲಿ ನಾವೂ ಸಹಕಾರ ನೀಡುವದಾಗಿ ಹೇಳಿದರು.

ಪಕ್ಷಕ್ಕೆ ನಷ್ಟವಿಲ್ಲ :ಸಂಕೇತ್ ಪೂವಯ್ಯ ಕಾಂಗ್ರೆಸ್ ಸೇರ್ಪಡೆಗೊಂಡಿರುವದು ನೋವುಂಟು ಮಾಡಿದೆ. ಆದರೆ ಇದರಿಂದ ಪಕ್ಷಕ್ಕೆ ಯಾವದೇ ನಷ್ಟವಿಲ್ಲವೆಂದು ಹೇಳಿದ ಅವರು, ತಾನು ಯಾವದೇ ಕಾರಣಕ್ಕೂ ಜೆಡಿಎಸ್ ತೊರೆಯುವದಿಲ್ಲ. ಈ ಬಗ್ಗೆ ಕೆಲವರು ಗೊಂದಲ ಸೃಷ್ಟಿ ಮಾಡುತ್ತಿರುವದಾಗಿ ಸ್ಪಷ್ಟಪಡಿಸಿದರು.

ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕೈಗೊಂಡಿರುವ ಕಾರ್ಯಗಳ ಬಗ್ಗೆ ಪ್ರತಿ ಮನೆಗಳಿಗೆ ತಲಪಿಸುವ ನಿಟ್ಟಿನಲ್ಲಿ ಪ್ರತಿ ಬೂತ್ ಮಟ್ಟದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವದೆಂದು ಇದೇ ಸಂದರ್ಭದಲ್ಲಿ ಹೇಳಿದರು.

ಗೋಷ್ಠಿಯಲ್ಲಿ ಜಿಲ್ಲಾ ಖಜಾಂಚಿ ಡೆನ್ನಿ ಬರೋಸ್, ಉಪಾಧ್ಯಕ್ಷ ಬಲ್ಲಚಂಡ ಗೌತಂ, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾವತಿ ರಮೇಶ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಸಾಕ್ ಖಾನ್, ಕಾರ್ಯದರ್ಶಿ ಮೋಹನ್ ಮೌರ್ಯ ಇದ್ದರು.