ವಿಶ್ವಾಸ ಪಡೆಯಲು ಕಾರ್ಯಸೂಚಿ ಸಿದ್ಧಪಡಿಸಿ:ಮೋದಿ ಕರೆ

ಬೆಂಗಳೂರು, ಫೆ. ೨೪: ಪ್ರಪಂಚದ ಮೇಲೆ ಪರಿಣಾಮ ಬೀರುವ ವಿವಿಧ ಸಮಸ್ಯೆಗಳನ್ನು ಎದುರಿಸಲು ಎಲ್ಲರನ್ನೂ ಒಳಗೊಳ್ಳುವ ಕಾರ್ಯಸೂಚಿ ಸಿದ್ಧಪಡಿಸುವ ಅಗತ್ಯ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಹೇಳಿದ್ದಾರೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಜಿ೨೦ ಹಣಕಾಸು ಮಂತ್ರಿಗಳು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್‌ಗಳ ಸಭೆಯನ್ನು ಉದ್ದೇಶಿಸಿ ವೀಡಿಯೋ ಭಾಷಣ ಮಾಡಿದ ಪ್ರಧಾನಿ ಮೋದಿ, "ಜಾಗತಿಕ ಆರ್ಥಿಕ ನಾಯಕತ್ವವು ಎಲ್ಲರನ್ನೂ ಒಳಗೊಳ್ಳುವ ಕಾರ್ಯಸೂಚಿಯನ್ನು ಸಿದ್ಧಪಡಿಸುವ ಮೂಲಕ ವಿಶ್ವದ ವಿಶ್ವಾಸವನ್ನು ಮರಳಿ ಗಳಿಸಬೇಕು" ಎಂದು ಕರೆ ನೀಡಿದರು. ಭಾರತದ ಜಿ ೨೦ ಅಧ್ಯಕ್ಷತೆಯು - ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ - ಎಲ್ಲರನ್ನೂ ಒಳಗೊಳ್ಳುವ ದೃಷ್ಟಿಕೋನವನ್ನು ಒತ್ತಿಹೇಳಿದ ಪ್ರಧಾನಿ, ಜಾಗತಿಕ ಆರ್ಥಿಕತೆಯಲ್ಲಿ ಸ್ಥಿರತೆ, ವಿಶ್ವಾಸ ಮತ್ತು ಬೆಳವಣಿಗೆಯನ್ನು ಹೊಂದಲು ಗುಂಪುಗಳ ಸಹಕಾರ ಅತ್ಯಗತ್ಯ ಎಂದರು.

೧೫ನೇ ವಿಧಾನಸಭೆಯ ಕೊನೆಯ ಅಧಿವೇಶನಕ್ಕೆ ತೆರೆ

ಬೆಂಗಳೂರು, ಫೆ. ೨೪: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ವಿದಾಯ ಭಾಷಣದೊಂದಿಗೆ ೧೫ನೇ ವಿಧಾನಸಭೆಯ ಕೊನೆಯ ಅಧಿವೇಶನಕ್ಕೆ ಶುಕ್ರವಾರ ತೆರೆ ಬಿದ್ದಿದೆ. ಇಂದು ವಿಧಾಸಭೆಯಲ್ಲಿ ಬಿಎಸ್ ಯಡಿಯೂರಪ್ಪ ಅವರು ವಿದಾಯ ಭಾಷಣ ಮಾಡಿದ ಬಳಿಕ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕಲಾಪವನ್ನು ನಿರ್ದಿಷ್ಟಾವಧಿಗೆ ಮುಂದೂಡಿದರು. ಇಂದು ವಿಧಾನಸಭೆಯಲ್ಲಿ ಮಾತನಾಡಿದ ಯಡಿಯೂರಪ್ಪ ಅವರು, ಈ ಸದನದವನ್ನು ಸ್ಪೀಕರ್ ಆಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಯಶಸ್ವಿಯಾಗಿ ನಡೆಸಿದ್ದಾರೆ. ನೀವು ಮುಂದಿನ ಬಾರಿ ಮಂತ್ರಿಯಾಗಿ ಇಲ್ಲಿ ಕೂರಬೇಕು. ಇಲ್ಲಿ ಮಹಿಳೆಯರು ಹೆಚ್ಚು ಆಯ್ಕೆ ಆಗಬೇಕು ಎಂದು ಹೇಳಿದರು. ಇದೇ ವೇಳೆ ಶಿಕಾರಿಪುರದ ಜನರಿಗೆ ಧನ್ಯವಾದ ಹೇಳಿದ ಯಡಿಯೂರಪ್ಪ, ಅವರ ಋಣ ತೀರಿಸುವ ಕೆಲಸ ಮಾಡುತ್ತಿದ್ದೇನೆ. ಫೆಬ್ರವರಿ ೨೭ಕ್ಕೆ ನನಗೆ ೮೦ ವರ್ಷ ತುಂಬುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಹುಟ್ಟು ಹಬ್ಬಕ್ಕೆ ಬರಲಿದ್ದಾರೆ. ಅಂದೇ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಉದ್ಘಾಟನೆಯಾಗಲಿದೆ ಎಂದರು. ಇದೇ ವೇಳೆ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಬಿಎಸ್‌ವೈ, ದೇವೇಗೌಡರು ನಮಗೆ ಆದರ್ಶ. ಅವರನ್ನು ನೋಡಿ ಕಲಿಯುವಂತದ್ದು ತುಂಬಾ ಇದೆ. ಈ ವಯಸ್ಸಿನಲ್ಲೂ ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡುತ್ತಾರೆ, ಚಿಂತನೆ ಮಾಡುತ್ತಾರೆ. ಅವರು ನಮಗೆ ಆದರ್ಶ ಎಂದರು.

ಮೀಸಲಾತಿ ಹೆಚ್ಚಳ : ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟೀಸ್

ಬೆಂಗಳೂರು, ಫೆ. ೨೪: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳಕ್ಕೆ ಸಂಬAಧಿಸಿದ ಎಸ್‌ಸಿ-ಎಸ್‌ಟಿ ಕಾಯ್ದೆ ೨೦೨೩ರ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಈ ಸಂಬAಧ ರಾಜ್ಯ ಸರ್ಕಾರಕ್ಕೆ ನೋಟೀಸ್ ಜಾರಿ ಮಾಡಿದೆ. ನಗರದ ಕೆಎಲ್‌ಇ ಕಾನೂನು ಕಾಲೇಜಿನ ವಿದ್ಯಾರ್ಥಿ ಮಹೇಶ್ ಎಂಬವರು ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ವಿಭಾಗೀಯ ಪೀಠ, ರಾಜ್ಯ ಸರ್ಕಾರಕ್ಕೆ ನೋಟೀಸ್ ನೀಡಿದೆ. ಮೀಸಲಾತಿ ಹೆಚ್ಚಳ ಮಾಡಿರುವ ಕ್ರಮ ಸಂವಿಧಾನದ ಪರಿಚ್ಛೇದ ೧೪, ೧೫ ಮತ್ತು ೧೬ ಅನ್ನು ಉಲ್ಲಂಘಿಸಿದೆ. ಅಲ್ಲದೇ ಇಂದಿರಾ ಸಹಾನಿ ಪ್ರಕರಣದಲ್ಲಿ ಶೇ. ೫೦ರಷ್ಟು ಮೀಸಲಾತಿ ಮೀರಬಾರದು ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿಗೆ ತದ್ವಿರುದ್ಧವಾಗಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದಾರೆ. ರಾಜ್ಯ ಸರ್ಕಾರ, ಶಿಕ್ಷಣ ಮತ್ತು ನೇಮಕಾತಿಯಲ್ಲಿ ಎಸ್‌ಸಿ ಮೀಸಲಾತಿಯನ್ನು ಶೇ. ೧೫ ರಿಂದ ೧೭ಕ್ಕೆ ಮತ್ತು ಎಸ್‌ಟಿ ಮೀಸಲಾತಿಯನ್ನು ಶೇ. ೩ ರಿಂದ ೭ಕ್ಕೆ ಹೆಚ್ಚಿಸಿದೆ. ಸರ್ಕಾರದ ಈ ನಿಯಮ ಶೇ. ೫೦ರಷ್ಟು ಮಿತಿ ಮೀರಿದೆ. ಅಲ್ಲದೇ, ಸುಪ್ರೀಂ ಕೋಟ್‌ನ ತೀರ್ಪನ್ನು ಉಲ್ಲಂಘಿಸಿದAತಾಗಿದೆ. ಹೀಗಾಗಿ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿರುವ ಕ್ರಮ ಸಂವಿಧಾನ ಬಾಹಿರ ಎಂದು ಘೋಷಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ

ಉತ್ತರ ಕನ್ನಡ, ಫೆ. ೨೪: ಆಸ್ತಿ ವಿವಾದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹಾಡವಳ್ಳಿಯಲ್ಲಿ ನಡೆದಿದೆ. ಹತ್ಯೆಯಾದವರನ್ನು ಹಾಡವಳ್ಳಿ ನಿವಾಸಿ ಶಂಭು ಭಟ್ (೬೫), ಪತ್ನಿ ಮಾದೇವಿ ಭಟ್ (೪೦) ಮಗ ರಾಜೀವ್ ಭಟ್ (೩೪) ಸೊಸೆ ಕುಸುಮಾ ಭಟ್ (೩೦) ಎಂದು ಗುರುತಿಸಲಾಗಿದೆ. ಒಂದೇ ಕುಟುಂಬದ ಈ ನಾಲ್ವರನ್ನು ಕತ್ತಿಯಲ್ಲಿ ಕಡಿದು ಭೀಕರವಾಗಿ ಕೊಲೆ ಮಾಡಲಾಗಿದೆ. ಶವಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಆಸ್ತಿ ವಿಚಾರಕ್ಕೆ ಈ ಸಾಮೂಹಿಕ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆದರೆ ಕೊಲೆ ಮಾಡಿದವರು ಯಾರು? ಹತ್ಯೆಗೆ ನಿಖರ ಕಾರಣ ಏನು? ಎನ್ನುವುದು ಇನ್ನೂ ತಿಳಿದುಬಂದಿಲ್ಲ. ವಿಷಯ ತಿಳಿದು ಸ್ಥಳಕ್ಕೆ ಭಟ್ಕಳ ಗ್ರಾಮೀಣ ಠಾಣಾ ಪೊಲೀಸರು ದೌಡಾಯಿಸಿದ್ದು, ತನಿಖೆ ನಡೆಸಿದ್ದಾರೆ.

ಆರ್‌ಬಿಐ ಮಾಜಿ ಗವರ್ನರ್ ವಿರುದ್ಧ ಉಪ ರಾಷ್ಟçಪತಿ ವಾಗ್ದಾಳಿ

ನವದೆಹಲಿ, ಫೆ. ೨೪: ಆರ್‌ಬಿಐ ನಂತಹ ಪ್ರಮುಖ ಹುದ್ದೆಗಳಲ್ಲಿ ಭಾರತದಲ್ಲಿ ಅಲ್ಪಾವಧಿಗೆ ಕೆಲಸ ಮಾಡಿರುವ ಕೆಲವು ವಿದೇಶಿ ತಜ್ಞರು, ತಮ್ಮ ದೇಶಕ್ಕೆ ಮರಳಿದ ನಂತರ ನೀಡುವ ಹೇಳಿಕೆಯನ್ನು ದೇಶದ ಜನರು ಗಂಭೀರವಾಗಿ ಪರಿಗಣಿಸಬಾರದು ಎಂದು ಉಪರಾಷ್ಟçಪತಿ ಜಗದೀಪ್ ಧನಕರ್ ಹೇಳಿದ್ದಾರೆ. ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ೬೧ ನೇ ಘಟಿಕೋತ್ಸವ ಉದ್ಘಾಟಿಸಿ ಮಾತನಾಡಿದ ಧನಕರ್, ಸತತ ಪ್ರಯತ್ನಗಳ ನಂತರ ಭಾರತ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ.ಆದರೂ, ಕೆಲವು ಜನರು ಭಾರತದ ಆರ್ಥಿಕತೆ ಬಗ್ಗೆ ತಪ್ಪು ಕಲ್ಪನೆ ಹರಡುತ್ತಿದ್ದಾರೆ ಎಂದು ಅವರು ಹೇಳುವ ಮೂಲಕ ರಘುರಾಮ್ ರಾಜನ್ ವಿರುದ್ಧ ವಾಗ್ದಾಳಿ ನಡೆಸಿದರು. ಈ ರಾಷ್ಟçಕ್ಕಾಗಿ ಬೆವರು ಹರಿಸುವವರ ಸಾಧನೆಗಳನ್ನು ಕುಗ್ಗಿಸಲು, ಕಳಂಕ ತರಲು ಪ್ರಯತ್ನಿಸುವ ಯಾರೊಬ್ಬರಿಗೂ ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದರು.

ಅರಣ್ಯಾಧಿಕಾರಿಗಳ ಮೇಲೆ ಕಲ್ಲು ತೂರಾಟ

ದಕ್ಷಿಣ ಕನ್ನಡ, ಫೆ. ೨೪: ಈ ಹಿಂದೆ ಇಬ್ಬರನ್ನು ಕೊಂದಿದ್ದ ಕಾಡಾನೆಯನ್ನು ಸೆರೆಹಿಡಿದ ನಂತರ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಸ್ಥರು ಅರಣ್ಯ ಅಧಿಕಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಕಾಡಾನೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿರುವ ಅಧಿಕಾರಿಗಳು ಸಂಭ್ರಮಾಚರಣೆ ನಡೆಸುತ್ತಿರುವಾಗಲೇ ಶುಕ್ರವಾರ ಈ ಘಟನೆ ನಡೆದಿದೆ. ಸೆರೆ ಹಿಡಿದ ಕಾಡಾನೆಯನ್ನು ಸಾಕಾನೆಗಳ ನೆರವಿನಿಂದ ರಸ್ತೆ ಬದಿಗೆ ತಂದಿದ್ದರು. ಈ ವೇಳೆ ಅಲ್ಲಿ ಸೇರಿದ್ದ ಸಾರ್ವಜನಿಕರು ಆನೆಗಳನ್ನು ಹಿಡಿಯುವ ಕಾರ್ಯಾಚರಣೆ ಪೂರ್ಣಗೊಳಿಸಿಲ್ಲ. ಕೇವಲ ಒಂದು ಆನೆಯನ್ನು ಮಾತ್ರ ಹಿಡಿದಿದ್ದೀರಿ ಎಂದು ಆರೋಪಿಸಿ ಅಧಿಕಾರಿಗಳ ಮೇಲೆ ಮುಗಿಬಿದ್ದಿದ್ದಾರೆ. ಇದೇ ವಿಚಾರವಾಗಿ ಎರಡೂ ಕಡೆಯವರ ನಡುವೆ ಮಾತಿನ ಚಕಮಕಿ ನಡೆದಿದೆ. ಕಾರ್ಯಾಚರಣೆಯನ್ನು ನಿಲ್ಲಿಸಿಲ್ಲ. ನಾಳೆ ಮತ್ತೆ ಬರುತ್ತೇವೆ ಎಂದು ಅಧಿಕಾರಿಗಳು ಹೇಳಿದರೂ ಕೇಳದೇ ಸಾರ್ವಜನಿಕರು ಕಲ್ಲು ತೂರಾಟ ನಡೆಸಿ, ಹಲ್ಲೆಗೆ ಮುಂದಾಗಿದ್ದಾರೆ. ಕಲ್ಲು ತೂರಾಟದಿಂದಾಗಿ ಎರಡು ಪೊಲೀಸ್ ಇಲಾಖೆಯ ಜೀಪ್, ಅರಣ್ಯ ಇಲಾಖೆಯ ಒಂದು ಜೀಪ್, ವಲಯ ಅರಣ್ಯಾಧಿಕಾರಿಯೊಬ್ಬರ ಬ್ರೀಝಾ ಕಾರುಗಳಿಗೆ ಹಾನಿ ಉಂಟಾಗಿದೆ. ಡಿವೈಎಸ್ಪಿ ಒಬ್ಬರ ಮೇಲೂ ಕಲ್ಲು ತೂರಲಾಗಿದೆ’ ಎಂದು ಗೊತ್ತಾಗಿದೆ.