ಕೂಡಿಗೆ, ಫೆ. ೨೪: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿ ಗ್ರಾ.ಪಂ. ಸದಸ್ಯರೊಬ್ಬರು ರಸ್ತೆ ಅತಿಕ್ರಮಣ ಮಾಡಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಪಂಚಾಯಿತಿ ಎದರು ಪ್ರತಿಭಟಿಸಿದರು.
ಚಿಕ್ಕತ್ತೂರು ಗ್ರಾಮದ ಹಾರಂಗಿ ಮುಖ್ಯ ರಸ್ತೆಯಿಂದ ದೊಡ್ಡತ್ತೂರು ಫಾರಂ ಗದ್ದೆಗೆ ಸಂಪರ್ಕ ಕಲ್ಪಿಸುವ ೧೫೦ ಮೀ ಉದ್ದದ ರಸ್ತೆಯನ್ನು ಜನಪ್ರತಿನಿಧಿ ಅತಿಕ್ರಮಣ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹಲವು ಬಾರಿ ದೂರು ನೀಡಿದರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ರಸ್ತೆ ಬದಿ ಜನಪ್ರತಿನಿಧಿಯ ಜಮೀನಿದ್ದು ೧೫೦ ಮೀ. ಉದ್ದಕ್ಕೆ ಸುಮಾರು ೧೦ ಅಡಿಗಳಷ್ಟು ರಸ್ತೆಯ ಜಾಗ ಅತಿಕ್ರಮಿಸಿ ಬೇಲಿ ಅಳವಡಿಸಿಕೊಂಡಿದ್ದಾರೆ. ಇದರಿಂದ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತಿಲ್ಲ ಎಂದು ಗ್ರಾಮಸ್ಥರು ದೂರಿದರು.
ಪ್ರತಿಭಟನೆಯ ಸ್ಥಳಕ್ಕೆ ಕುಶಾಲನಗರ ತಾಲೂಕು ತಹಶೀಲ್ದಾರ್ ಪ್ರಕಾಶ್, ತಾಲೂಕು ಕಾರ್ಯನಿರ್ವಹಣಾಧಿಕಾರಿ ಜಯಣ್ಣ, ಕಂದಾಯ ನಿರೀಕ್ಷಕ ಸಂತೋಷ ಸೇರಿದಂತೆ ವಿವಿಧ ಅಧಿಕಾರಿಗಳು ಆಗಮಿಸಿ ಗ್ರಾಮಸ್ಥರ ಅಹವಾಲನ್ನು ಸ್ವೀಕರಿಸಿ, ವಿವಾದಿತ ಜಾಗದ ಸರ್ವೆ ಕಾರ್ಯ ನಡೆದಿದೆ. ಅದರ ನಕ್ಷೆಯ ವರದಿಯು ಬಂದ ನಂತರ ನಿಯಮಾನುಸಾರ ಕ್ರಮವನ್ನು ತೆಗೆದುಕೊಳ್ಳುವ ಭರವಸೆಯನ್ನು ನೀಡಿದ ನಂತರ ಪ್ರತಿಭಟನೆ ಹಿಂಪಡೆದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರಾದ ದಿನೇಶ್, ಗಿರೀಶ್, ಮಣಿಕುಮಾರ್, ಭಾಗ್ಯ, ಖತಿಜ, ಗ್ರಾಮಸ್ಥರಾದ ಬಿ. ಹರ್ಷ, ಎನ್. ರಾಮೇಗೌಡ, ದಿಲೀಪ್ ಕುಮಾರ್, ಸಿ.ಹೆಚ್. ಮಂಜು, ಸಚಿನ್, ರಮೀಜ್ ಅಹಮ್ಮದ್, ಚಂದ್ರನ, ಲಕ್ಷಿö್ಮ, ಅಜಯ್, ಮೀನಾಕ್ಷಿ, ಪುಟ್ಟೇಗೌಡ, ರಾಧಾ, ಉದಯಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.