ಮಡಿಕೇರಿ, ಫೆ. ೨೩: ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮಂಡಿಸಿದ ಬಜೆಟ್‌ನಲ್ಲಿ ಕೊಡಗನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿರುವ ಸಿಪಿಐಎಂ ಜಿಲ್ಲಾ ಸಮಿತಿ ಈ ಹಿನ್ನೆಲೆಯಲ್ಲಿ ತಾ. ೨೫ ಮತ್ತು ೨೬ ರಂದು ಜನಾಂದೋಲನ ಹಮ್ಮಿಕೊಂಡಿದೆ.

ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಹೆಚ್.ಪಿ. ರಮೇಶ್, ಜಿಲ್ಲಾ ಸಮಿತಿ ಸದಸ್ಯರುಗಳಾದ ಎ.ಸಿ. ಸಾಬು, ಎನ್.ಡಿ. ಕುಟ್ಟಪ್ಪ ಮಾತನಾಡಿದರು. ಕೊಡಗಿನಲ್ಲಿ ಕಾಡು ಪ್ರಾಣಿಗಳಿಂದಾಗುತ್ತಿರುವ ಪ್ರಾಣ ಹಾನಿ ಹಾಗೂ ಬೆಳೆ ನಾಶಕ್ಕೆ ಶಾಶ್ವತ ಪರಿಹಾರ ಒದಗಿಸುವ ಸಂಬAಧ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪವಿಲ್ಲ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರೀಕ್ಷೆಯೂ ಹುಸಿಯಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿ ಸಂಬAಧವೂ ಯೋಜನೆಗಳ ಘೋಷಿಸಲ್ಪಟ್ಟಿಲ್ಲ. ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಕೊಡಗನ್ನು ಸಂಪೂರ್ಣವಾಗಿ ಕತ್ತಲಿನಲ್ಲಿಡಲಾಗಿದೆ ಎಂದು ಆರೋಪಿಸಿದರು.

ಈ ಹಿನ್ನೆಲೆಯಲ್ಲಿ ತಾ. ೨೫ ರಂದು ಬೆಳಿಗ್ಗೆ ೧೦ ಗಂಟೆಗೆ ಮಡಿಕೇರಿಯಿಂದ ಚೆಟ್ಟಳ್ಳಿ ಹಾಗೂ ತಾ. ೨೬ ರಂದು ಬೆಳಿಗ್ಗೆ ೧೦ ಗಂಟೆಗೆ ವೀರಾಜಪೇಟೆಯಿಂದ ನೆಲ್ಲಿಹುದಿಕೇರಿವರೆಗೆ ಜನಾಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಗೋಷ್ಠಿಯಲ್ಲಿ ಜಿಲ್ಲಾ ಸಮಿತಿ ಸದಸ್ಯ ಶಿವಪ್ಪ ಉಪಸ್ಥಿತರಿದ್ದರು.