ವೀರಾಜಪೇಟೆ, ಫೆ. ೨೩: ವನ್ಯಜೀವಿ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಅರಣ್ಯದಂಚಿನಲ್ಲಿ ನಿರ್ಮಿಸಿರುವ ಕಂದಕ ಅವೈಜ್ಞಾನಿಕವಾಗಿದ್ದು, ಸೋಲಾರ್ ಬೇಲಿ ಅಳವಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವೀರಾಜಪೇಟೆ ತಾಲೂಕು ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲಂಗಾಲ ಗ್ರಾಮದ ತೋಮರ ಗ್ರಾಮಕ್ಕೆ ಹೊಂದಿಕೊAಡಿರುವAತೆ ತೋಮರ ಹಾಗೂ ಮಲೆತಿರಿಕೆ ಬೆಟ್ಟದ ತಪ್ಪಲು ಪ್ರದೇಶದ ಸುಮಾರು ೫ ಕಿ.ಮಿ ಗಳಷ್ಟು ದೂರದವರೆಗೆ ಕಂದಕ ನಿರ್ಮಾಣದ ಯೋಜನೆಯನ್ನು ಸರ್ಕಾರದ ಅನುದಾನದಿಂದ ಅರಣ್ಯ ಇಲಾಖೆಯ ರೂಪಿಸಿದೆ. ಒಂದು ಕಿ.ಮೀ., ೧೦ ಅಡಿ ಆಳ ಮತ್ತು ೬ ಅಡಿ ಅಗಲ ಅಳತೆಯಲ್ಲಿ ಕಂದಕದ ನಿರ್ಮಾಣದ ಯೋಜನೆ ಇದಾಗಿದ್ದು, ಮಳೆಗಾಲದಲ್ಲಿ ಕಂದಕದಲ್ಲಿ ಮಳೆ ನೀರು ಸಂಗ್ರಹಗೊAಡು ಅನಾಹುತಗಳು ಸಂಭವಿಸಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಕಂದಕ ನಿರ್ಮಾಣದ ಯೋಜನೆಯನ್ನು ಕೈಬಿಟ್ಟು ಸೋಲಾರ್ ಬೇಲಿಯನ್ನು ಅಳವಡಿಸಬೇಕು ಎಂದು ಆಗ್ರಹಿಸಿದ್ದಾರೆ.

೨೦೧೯ ರಲ್ಲಿ ಸುರಿದ ಮಹಾಮಳೆಗೆ ತೋಮರ ಗ್ರಾಮದ ಕೊರ್ತಿಕಾಡ್ ಎಂಬಲ್ಲಿ ನೂರಾರು ಎಕರೆ ಅರಣ್ಯ ಪ್ರದೇಶ ಸೇರಿದಂತೆ ಕಾಫಿ ತೋಟಗಳು ಭೂಕುಸಿತಗೊಂಡು ಅಪಾರ ನಷ್ಟ ಸಂಭವಿಸಿತ್ತು. ಅಲ್ಲದೆ ೧೦ ಮಂದಿ ಭೂಕುಸಿತದಲ್ಲಿ ಪ್ರಾಣ ಕಳೆದುಕೊಂಡ ದುರ್ಘಟನೆ ನಡೆದಿತ್ತು. ಇಷ್ಟೆಲ್ಲಾ ಘಟನೆಗಳು ನಡೆದಿದ್ದರು ಕಂದಕ ನಿರ್ಮಾಣ ಮಾಡುತ್ತಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಕಾಡಾನೆಗಳು ಕಾಫಿ ತೋಟಗಳಿಗೆ ಲಗ್ಗೆ ಇಟ್ಟು, ಸಮಸ್ಯೆ ಮಾಡುತ್ತಿದೆ. ಇದರಿಂದ ಕೃಷಿ ಫಸಲು ನಾಶವಾಗುತ್ತಿದ್ದು, ಜೀವ ಭಯದಲ್ಲಿ ಜೀವನ ಸಾಗಿಸುವಂತಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದು, ಅರಣ್ಯ ಇಲಾಖೆ ಸೂಕ್ತ ಕ್ರಮವಹಿಸಬೇಕೆಂದು ಒತ್ತಾಯಿಸಿದ್ದಾರೆ.