ಮಡಿಕೇರಿ, ಫೆ. ೨೧: ಮಡಿಕೇರಿ ತಾಲೂಕು ಸವಿತಾ ಸಮಾಜದ ವತಿಯಿಂದ ತಾ. ೨೬, ೨೭, ೨೮ ರಂದು ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಜಿಲ್ಲಾಮಟ್ಟದ ಕ್ರೀಡೋತ್ಸವ ನಡೆಯಲಿದೆ. ಸಮಾಜ ತಾಲೂಕು ಅಧ್ಯಕ್ಷ ಎಂ.ಟಿ. ಮಧು ಹಾಗೂ ಕ್ರೀಡಾ ಸಮಿತಿ ಅಧ್ಯಕ್ಷ ಮಧು ಚೆಟ್ಟಿಮಾನಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಶಟಲ್ ಬ್ಯಾಡ್ಮಿಂಟನ್, ಕ್ರಿಕೆಟ್, ಥ್ರೋಬಾಲ್ ಸೇರಿದಂತೆ ಮಕ್ಕಳಿಗೆ ಕಾಳು ಹೆಕ್ಕುವುದು, ಕಪ್ಪೆ ಜಿಗಿತ, ೫೦ ಮೀಟರ್ ಓಟ, ೧೦೦ ಮೀಟರ್ ಓಟ, ೨೦೦ ಮೀಟರ್ ಓಟ, ಮಹಿಳೆಯರಿಗೆ, ಪುರುಷರಿಗೆ ಭಾರದ ಗುಂಡು ಎಸೆತ, ೫೦ ವರ್ಷ ಮೇಲ್ಪಟ್ಟ ಪುರುಷರು, ಮಹಿಳೆಯರಿಗೆ ಕಣ್ಣು ಕಟ್ಟಿ ಮಡಿಕೆ ಒಡೆಯುವುದು, ಪುರುಷರು, ಮಹಿಳೆಯರಿಗೆ ಹಗ್ಗಜಗ್ಗಾಟ, ಬಾಂಬ್ ಇನ್ ದಿ ಸಿಟಿ ಸ್ಪರ್ಧೆಗಳು ನಡೆಯಲಿವೆ. ಹೆಚ್ಚಿನ ಮಾಹಿತಿಗೆ ೯೦೩೬೬೪೯೨೩೫, ೭೪೮೩೭೬೭೧೨೯ ದೂರವಾಣಿಗಳನ್ನು ಸಂಪರ್ಕಿಸ ಬಹುದು ಎಂದು ತಿಳಿಸಿದರು.
ತಾ. ೨೬ ರಂದು ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಎಂ.ಟಿ. ಮಧು ಅಧ್ಯಕ್ಷತೆಯಲ್ಲಿ ಬ್ಯಾಡ್ಮಿಂಟನ್ ಪಂದ್ಯಾಟದ ಉದ್ಘಾಟನೆ ಬೆಳಿಗ್ಗೆ ೧೦ ಗಂಟೆಗೆ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ನಗರಸಭಾ ಮಾಜಿ ಅಧ್ಯಕ್ಷ ನಂದಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ್ ಸುಬ್ರಮಣಿ, ಪತ್ರಕರ್ತ ಬೊಳ್ಳಜಿರ ಬಿ. ಅಯ್ಯಪ್ಪ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ತಾ. ೨೭ ರಂದು ಬೆಳಿಗ್ಗೆ ೯ ಗಂಟೆಗೆ ಕ್ರೀಡಾಕೂಟ ಉದ್ಘಾಟನೆ ತಾಲೂಕು ಸವಿತಾ ಸಮಾಜದ ಕ್ರೀಡಾ ಸಮಿತಿ ಅಧ್ಯಕ್ಷ ಮಧು ಚೆಟ್ಟಿಮಾನಿ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಕೆ.ಎಫ್. ದೊರೇಶ್, ಉಪಾಧ್ಯಕ್ಷ ಶಿವಾಜಿ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಶಿವಣ್ಣ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ತಾ. ೨೮ ರಂದು ಸಂಜೆ ೪ ಗಂಟೆಗೆ ಕ್ರೀಡಾಕೂಟದ ಸಮಾರೋಪ ಸಮಾರಂಭ ಜಿಲ್ಲಾಧ್ಯಕ್ಷ ಕೆ.ಎಸ್. ದೊರೇಶ್ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಸವಿತಾ ಸಮಾಜ ಅಭಿವೃದ್ಧಿ ನಿಗಮದ ಅಧ್ಯಕ್ಷ ನರೇಶ್ ಕುಮಾರ್, ಸವಿತಾ ಸಮಾಜದ ರಾಜ್ಯಾಧ್ಯಕ್ಷ ಸಂಪತ್ ಕುಮಾರ್, ಕಾರ್ಯಾಧ್ಯಕ್ಷ ಕಿರಣ್ ಕುಮಾರ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಅವರುಗಳು ಮಾಹಿತಿಯಿತ್ತರು.
ಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಎಂ.ಜಿ. ಚರಣ್, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಆರ್.ಬಿ. ವಸಂತಿ, ಮಡಿಕೇರಿ ನಗರಾಧ್ಯಕ್ಷ ಟಿ.ಜಿ. ಸಂದೇಶ್, ಕಾರ್ಯದರ್ಶಿ ಚರಣ್ ಉಪಸ್ಥಿತರಿದ್ದರು.