ಬೆಂಗಳೂರು, ಫೆ. ೨೧: ರಾಜ್ಯದ ಸುಂದರ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಕೊಡಗನ್ನು ಸ್ವಿಟ್ಜರ್ಲೆಂಡ್ ಅಥವಾ ಕಾಶ್ಮೀರವನ್ನಾಗಿ ಮಾಡಬೇಕಿಲ್ಲ. ಕೊಡಗನ್ನು ಕೊಡಗಾಗಿಯೇ ಉಳಿಸಿಕೊಂಡು ಅಭಿವೃದ್ಧಿ ಮಾಡಬೇಕಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ್ ಹೇಳಿದರು.

ಸೋಮವಾರ ವಿಧಾನಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಡಾ. ತಿಮ್ಮಯ್ಯ ಪರ ನಾಗರಾಜ್ ಯಾದವ್ ಕೇಳಿದ ಪ್ರಶ್ನೆಗೆ ಆನಂದ್ ಸಿಂಗ್ ಪರ ಸಚಿವರು ಉತ್ತರಿಸಿದರು. ಮೈಸೂರು ಪ್ರವಾಸಿ ಕ್ಷೇತ್ರದಲ್ಲಿ ವಿಶ್ವದ ಗಮನ ಸೆಳೆದಿದೆ. ಸಾರಿಗೆ ಸೌಲಭ್ಯ, ವಸತಿ ವ್ಯವಸ್ಥೆ ಸೇರಿದಂತೆ ಎಲ್ಲ ಸೌಲಭ್ಯ ಕಲ್ಪಿಸಲು ಆಗುತ್ತಿರುವ ವಿಳಂಬ ತಡೆಗೆ ಕ್ರಮ ಕೈಗೊಂಡು, ತ್ವರಿತವಾಗಿ ಅಭಿವೃದ್ಧಿ ಕಾರ್ಯ ಮಾಡಲಿದ್ದೇವೆ. ಪ್ರವಾಸೋದ್ಯಮಕ್ಕೆ ಹೆಚ್ಚಿನ ಅನುದಾನ ನೀಡಬೇಕು, ನೀವು ಏನು ಮಾಡಿಲ್ಲ ಅದನ್ನು ನಾವು ಮಾಡುತ್ತಿದ್ದೇವೆ ಎಂದರು.

ಅಲ್ಲಿಯವರೇ ಸಿಎಂ ಇದ್ದರೂ ಅಭಿವೃದ್ಧಿ ಮಾಡಿರಲಿಲ್ಲ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಸರ್ಕಾರಕ್ಕೆ ಟಾಂಗ್ ನೀಡಿದರು. ನಂತರ ಕೊಡಗನ್ನು ಸ್ವಿಟ್ಜರ್ಲೆಂಡ್ ಮಾದರಿ ಅಭಿವೃದ್ಧಿ ಮಾಡಬೇಕು ಎನ್ನುವುದನ್ನು ತಳ್ಳಿಹಾಕಿದ ಸಚಿವರು, ‘ಕೊಡಗನ್ನು ಸ್ವಿಟ್ಜರ್ಲೆಂಡ್, ಕಾಶ್ಮೀರ ಮಾಡಬೇಕಿಲ್ಲ, ಕೊಡಗನ್ನು ಕೊಡಗನ್ನಾಗಿಯೇ ಮಾಡಬೇಕಿದೆ’ ಎಂದರು. -ಇಂದ್ರೇಶ್