ಪಾಲಿಬೆಟ್ಟ, ಫೆ. ೨೧: ಕಾರು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರರಿಬ್ಬರು ಮೃತಪಟ್ಟ ಘಟನೆ ಪಾಲಿಬೆಟ್ಟ-ತಿತಿಮತಿ ರಸ್ತೆಯಲ್ಲಿ ನಡೆದಿದೆ.

ಕುಡಿಯುವ ನೀರಿನ ಟ್ಯಾಂಕ್ ಕೆಲಸಕ್ಕೆ ಎಂದು ಬೈಕಿನಲ್ಲಿ ಜಿಲ್ಲೆಗೆ ಆಗಮಿಸುತ್ತಿದ್ದ ಹುಣಸೂರು ತಾಲೂಕಿನ ಬನ್ನಿಕೊಪ್ಪ ಗ್ರಾಮದ ಕೆಂಪ ನಾಯಕ ಹಾಗೂ ದೊಡ್ಡಯ್ಯ ಅವರ ಬೈಕಿಗೆ ತಿತಿಮತಿ ಪಾಲಿಬೆಟ್ಟದ ಮುಖ್ಯರಸ್ತೆಯಲ್ಲಿ ಓಮ್ನಿ ವಾಹನ ಡಿಕ್ಕಿಪಡಿಸಿದ ಪರಿಣಾಮ ಬೈಕ್ ಸವಾರ ಕೆಂಪ ನಾಯಕ (೪೧) ಸ್ಥಳದಲ್ಲೇ ಮೃತಪಟ್ಟರೆ ಹಿಂಬದಿ ಸವಾರ ದೊಡ್ಡಯ್ಯ (೫೫) ಅವರಿಗೆ ಗಂಭೀರ ಗಾಯಗಳಾಗಿ ಪಾಲಿಬೆಟ್ಟ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಬಳಿಕ ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಅಮ್ಮತ್ತಿ ಹೊಸೂರು ಭಾಗದಲ್ಲಿ ಕೆಲಸಕ್ಕೆಂದು ಬೈಕಿನಲ್ಲಿ ಬರುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಕಾರು ಚಾಲಕ ಘಟನಾ ಸ್ಥಳದಿಂದ ಪರಾರಿಯಾಗಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.