ಮಡಿಕೇರಿ, ಫೆ. ೨೦: ಎಲ್ಲಾ ಕ್ಷೇತ್ರ ಮತ್ತು ಎಲ್ಲಾ ವರ್ಗದ ಜನರಿಗೂ ತೃಪ್ತಿಯಾಗಬಲ್ಲ ಬಜೆಟ್ ಅನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಂಡಿಸಿದ್ದಾರೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ ತಿಳಿಸಿದ್ದಾರೆ.
ಕೊಡಗಿನ ಶಾಸಕರುಗಳ ಮನವಿಗೆ ಸ್ಪಂದಿಸಿ ರಸ್ತೆಗಳ ಅಭಿವೃದ್ಧಿಗಾಗಿ ಸುಮಾರು ೧೦೦ ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ನ್ನು ಘೋಷಿಸಿದ್ದಾರೆ. ಮಹಿಳೆಯರು, ವಿದ್ಯಾರ್ಥಿಗಳು, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಹಾಗೂ ಕಾರ್ಮಿಕ ವರ್ಗಕ್ಕೆ ಬರಪೂರ ಕೊಡುಗೆಗಳನ್ನು ನೀಡಿದ್ದಾರೆ. ಕಿಸಾನ್ ಕಾರ್ಡ್ ಹೊಂದಿರುವ ರೈತರಿಗೆ ಭೂಸಿರಿ ಯೋಜನೆಯಡಿ ವಾರ್ಷಿಕ ೧೦ಸಾವಿರ ರೂ., ಶೂನ್ಯ ಬಡ್ಡಿ ದರದಲ್ಲಿ ರೂ.೩ ಲಕ್ಷದಿಂದ ೫ ಲಕ್ಷದ ವರೆಗೆ ರೈತರಿಗೆ ಸಾಲ, ಆಕಸ್ಮಿಕವಾಗಿ ಮೃತಪಡುವ ರೈತರಿಗೆ ಜೀವನ ಜ್ಯೋತಿ ವಿಮೆಯಡಿ ರೂ.೨ ಲಕ್ಷ ನೆರವು, ಕೃಷಿ ಯಂತ್ರೋಕರಣಗಳಿಗೆ ಆರ್ಥಿಕ ನೆರವು, ವಿದ್ಯಾರ್ಥಿನಿಯರಿಗೆ ಹಾಗೂ ಮಹಿಳಾ ಕಾರ್ಮಿಕರಿಗೆ ಉಚಿತ ಬಸ್ ಪಾಸ್, ಅಂಗನವಾಡಿ ಕಾರ್ಯಕರ್ತರಿಗೆ ರೂ.೫೦ ಸಾವಿರ ಸಹಾಯಧನ, ಮಹಿಳೆಯರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ಸೇರಿದಂತೆ ಅನೇಕ ಕೊಡುಗೆಗಳನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ ಎಂದಿದ್ದಾರೆ.
ಯುವ ಸಮೂಹ ಸೇರಿದಂತೆ ಎಲ್ಲಾ ವರ್ಗವನ್ನು ವಿಶ್ವಾಸಕ್ಕೆ ತೆಗೆದುಕೊಂಡು ರೂಪಿಸಿರುವ ಜನಪ್ರಿಯ ಬಜೆಟ್ ಇದಾಗಿದೆ ಎಂದು ಮಹೇಶ್ ಜೈನಿ ತಿಳಿಸಿದ್ದಾರೆ.