ಮಡಿಕೇರಿ, ಫೆ. ೨೦: ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡಿ ಬ್ಲಾಕ್ - ಮೋದೂರು ಗ್ರಾಮದ ಇಬ್ಬನಿ ಒಳಮಾಡು ಹಳ್ಳದ ಮೇಲ್ಭಾಗದಲ್ಲಿ ನಡೆಯುತ್ತಿರುವ ೨ ಕಿಂಡಿ ಅಣೆಕಟ್ಟೆಗಳ ನಿರ್ಮಾಣ ಕಾಮಗಾರಿಯನ್ನು ಸ್ಥಗಿತ ಗೊಳಿಸುವುದಾಗಿ ಸಣ್ಣ ನೀರಾವರಿ ಮತ್ತು ಅಂತರ ಜಲಾಭಿವೃದ್ಧಿಯ ಮಡಿಕೇರಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಭರವಸೆ ಇತ್ತಿದ್ದಾರೆ.
ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡಿ-ಬ್ಲಾಕ್‌ನಲ್ಲಿ ಚಿಕ್ಲಿಹೊಳೆಗೆ ಅಡ್ಡಲಾಗಿ ೧೦೦ ಮೀಟರ್ ಅಂತರದಲ್ಲಿ ೨ ಕಿಂಡಿ ಅಣೆಕಟ್ಟೆಗಳನ್ನು ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಿಸಲು ಉದ್ದೇಶಿಸಿ ಕಾಮಗಾರಿ ಪ್ರಗತಿಯಲ್ಲಿತ್ತು. ಕಾಮಗಾರಿ ಪ್ರಾರಂಭಿಸುವಾಗಲೇ ಗ್ರಾಮದ ಜನರ ಅಭಿಪ್ರಾಯ ಸಂಗ್ರಹಿಸದೆ ಇದ್ದ ಬಗ್ಗೆ ಇಲಾಖೆ ವಿರುದ್ಧ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
ಇದೀಗ ಕಾಮಗಾರಿ ಪ್ರಗತಿಯಲ್ಲಿದ್ದು, ಅಣೆಕಟ್ಟೆ ನಿರ್ಮಾಣಗೊಂಡರೆ, ಹೊಳೆ ಕೆಳಗಿನ ಪ್ರದೇಶದಲ್ಲಿನ ರೈತರಿಗೆ ತೀವ್ರ ತರಹದ ಸಮಸ್ಯೆ ಉಂಟಾಗುವುದಾಗಿ ರೈತರು ಆರೋಪಿಸಿದ್ದರು. ಇತ್ತೀಚೆಗೆ ೧೨೮ ಎಕ್ರೆ ತೋಟವನ್ನು ಹೊರಜಿಲ್ಲೆಯವರು ಕೆದಕಲ್ ಡಿ ಬ್ಲಾಕ್ ಬಳಿ ಖರೀದಿಸಿದ್ದರು. ಅಣೆಕಟ್ಟೆ ನಿರ್ಮಾಣಗೊಂಡರೆ ಈ ವ್ಯಕ್ತಿಗೆ ಮಾತ್ರ ಇದರ ಪ್ರಯೋಜನವಾಗಲಿದ್ದು, ಇತರ ರೈತರಿಗೆ ಕಂಟಕವಾಗಲಿದೆ ಎಂಬುದಾಗಿಯೂ ಗ್ರಾಮಸ್ಥರು ಆರೋಪಿಸಿ ಗ್ರಾಮ ಪಂಚಾಯಿತಿಯ ಗಮನಕ್ಕೆ ತಂದಿದ್ದರು.
ಒAದು ವೇಳೆ ಅಣೆಕಟ್ಟೆ ನಿರ್ಮಾಣಗೊಂಡರೆ, ಡಿಸೆಂಬರ್ ನಿಂದ ಮೇ ತಿಂಗಳವರೆಗೆ ಹೊಳೆ ಕೆಳಗಿನ ಪ್ರದೇಶದಲ್ಲಿನ ರೈತರಿಗೆ ನೀರಿನ ಸಮಸ್ಯೆ ಉಂಟಾಗಲಿದೆ ಎಂದು ಕೆದಕಲ್ ಪಂಚಾಯಿತಿ ಉಪಾಧ್ಯಕ್ಷ ಸಂಜು ಪೊನ್ನಪ್ಪ ಅವರು ಮಾಹಿತಿ ನೀಡಿದರು.
(ಮೊದಲ ಪುಟದಿಂದ) ಸಮಸ್ಯೆ ಪರಿಹಾರಕ್ಕಾಗಿ ಸ್ಥಳಕ್ಕೆ ಗ್ರಾಮಸ್ಥರು ಹಾಗೂ ಪಂಚಾಯಿತಿ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿ ಇಂದು ಗ್ರಾಮಸ್ಥರು ಹಾಗೂ ಪಂಚಾಯಿತಿ ಸದಸ್ಯರೂ ಸೇರಿ ಸಭೆ ಏರ್ಪಡಿಸಿ ಒಮ್ಮತದಿಂದ ಕಾಮಗಾರಿ ಸ್ಥಗಿತಕ್ಕೆ ಇಲಾಖೆಯನ್ನು ಒತ್ತಾಯಿಸುವುದಾಗಿ ನಿರ್ಣಯ ಕೈಗೊಂಡರು. ತೀವ್ರ ವಿರೋಧದ ನಡುವೆ ಇದೀಗ ಇಲಾಖಾ ಅಭಿಯಂತರರು ಗ್ರಾಮ ಪಂಚಾಯಿತಿಗೆ ಕಾಮಗಾರಿ ನಿಲ್ಲಿಸುವುದಾಗಿ ಹಾಗೂ ಈಗಾಗಲೇ ನಡೆದಿರುವ ಕಾಮಗಾರಿಯನ್ನು ತೆಗೆದು ಹಾಕಿ ಯಥಾಸ್ಥಿತಿ ಕಾಪಾಡಲಾಗುವು ದಾಗಿ ಪತ್ರದ ಮೂಲಕ ಭರವಸೆ ಇತ್ತಿದ್ದಾರೆ.