ಸೋಮವಾರಪೇಟೆ, ಫೆ. ೧೯: ಪಟ್ಟಣಕ್ಕೆ ಹತ್ತಿರವಿರುವ ದೊಡ್ಡಮಳ್ತೆ ಗ್ರಾಮ ಪಂಚಾಯಿತಿಯನ್ನು ಸೋಮವಾರಪೇಟೆ ಕಸಬಾ ಹೋಬಳಿಗೆ ಸೇರ್ಪಡೆಗೊಳಿಸ ಬೇಕೆಂದು ಗ್ರಾಮಸ್ಥರು ಗ್ರಾಮ ಸಭೆಯಲ್ಲಿ ಒತ್ತಾಯಿಸಿದರು.
ಶನಿವಾರಸಂತೆ ನಾಡಕಚೇರಿಯ ಕಾರ್ಯವೈಖರಿಯಿಂದ ರೈತರು ಹೈರಾಣಾಗಿದ್ದಾರೆ. ನಿಗದಿತ ಸಮಯ ದಲ್ಲಿ ಯಾವುದೇ ಕೆಲಸವಾಗುತ್ತಿಲ್ಲ. ಸಂತೆ ದಿನವಾದ ಶನಿವಾರವೂ ಸಹ ಶನಿವಾರಸಂತೆಯ ನಾಡಕಚೇರಿಯಲ್ಲಿ ಅಧಿಕಾರಿಗಳು ಕಾಣಸಿಗುವುದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದರಲ್ಲದೆ, ಸೋಮವಾರಪೇಟೆ ಹೋಬಳಿಗೆ ಸೇರ್ಪಡೆಗೊಳಿಸಲು ಆಗ್ರಹಿಸಿದರು. ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವತಿಯಿಂದ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ಕೆ.ಎಂ. ಬಿಂದು ಅವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಕಂದಾಯ ಇಲಾಖೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರಿಗೆ ಕರೆ ಮಾಡಿದರೆ ಅವರುಗಳು ಕರೆ ಸ್ವೀಕರಿಸುತ್ತಾರೆ. ಆದರೆ, ಶನಿವಾರಸಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರ ಕರೆಗಳನ್ನು ಸ್ವೀಕರಿಸುವುದಿಲ್ಲ ಎಂದು ಗ್ರಾ.ಪಂ. ಸದಸ್ಯ ಗೋಪಾಲಕೃಷ್ಣ ಆರೋಪಿಸಿದರು.
ರೈತಾಪಿ ವರ್ಗ ಹಾಗೂ ಕೂಲಿ ಕಾರ್ಮಿಕರು ಕೆಲಸಕ್ಕೆ ರಜೆ ಹಾಕಿ ಶನಿವಾರಸಂತೆ ಕಂದಾಯ ಇಲಾಖೆಗೆ ಹೋದರೆ, ಉಪ ತಹಶೀಲ್ದಾರ್ ಹಾಗೂ ಕಂದಾಯ ನಿರೀಕ್ಷಕರು ಸಿಗುವುದಿಲ್ಲ. ಮೀಟಿಂಗ್ಗೆ ಹೋಗಿದ್ದಾರೆ ಎಂದು ಸಿದ್ದ ಉತ್ತರ ಸಿಗುತ್ತದೆ ಎಂದು ಬಹುತೇಕ ಸಾರ್ವಜನಿಕರು ದೂರಿದರು.
ಸಂತೆ ದಿನವಾದ ಶನಿವಾರದಂದು ನಾಡ ಕಚೇರಿಯಲ್ಲಿ ಬೆಳಿಗ್ಗೆ ೧೦ ಗಂಟೆಯಿAದ ಸಂಜೆ ೫ ಗಂಟೆ ತನಕ ಎಲ್ಲಾ ಅಧಿಕಾರಿಗಳು ಅವರ ಕುರ್ಚಿಯಲ್ಲಿ ಕುಳಿತು ಸಾರ್ವಜನಿಕರ ಕೆಲಸ ಮಾಡಿಕೊಡಬೇಕು ಎಂದು ಗ್ರಾಮಸ್ಥರಾದ ಎಸ್.ಎಂ. ಕೃಷ್ಣ ಒತ್ತಾಯಿಸಿದರಲ್ಲದೆ, ಈ ಬಗ್ಗೆ ಸಭೆ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿ ಗಳಿಗೆ ಕಳುಹಿಸುವಂತೆ ತಿಳಿಸಿದರು. ಸಭೆಯ ನಿರ್ಣಯವನ್ನು ಸಂಬAಧಪಟ್ಟ ಅಧಿಕಾರಿಗಳಿಗೆ ಕಳುಹಿಸಿ ಕೊಡಲಾಗುವುದು ಎಂದು ನೋಡೆಲ್ ಅಧಿಕಾರಿ ಸ್ವಾಮಿ ಸಭೆಗೆ ತಿಳಿಸಿದರು.
ಮಳೆಗಾಲದ ಮಳೆಯಿಂದ ಅನೇಕ ಬಡವರ ಮನೆಗಳು ಕುಸಿದಿವೆ. ಇದುವರೆಗೆ ಪರಿಹಾರ ಸಿಕ್ಕಿಲ್ಲ. ಬಡವರ ನೋವನ್ನು ಕೇಳುವವರು ಇಲ್ಲದಂತಾಗಿದೆ ಎಂದು ಕೆಲವರು ಆರೋಪಿಸಿದರು. ಅಧಿಕೃತ ಮನೆಗಳಿಗೆ ಪರಿಹಾರ ನೀಡಲಾಗಿದೆ. ಹಾನಿ ಯಾಗಿರುವ ಅನಧಿಕೃತ ಮನೆಗಳ ಪೂರ್ಣ ವಿವರವನ್ನು ಸರ್ಕಾರಕ್ಕೆ ಕಳಹಿಸಿಲಾಗಿದೆ. ಹಣ ಬಿಡುಗಡೆಯಾದ ನಂತರ ಪರಿಹಾರ ವಿತರಣೆ ಆಗಲಿದೆ ಎಂದು ಗ್ರಾಮ ಲೆಕ್ಕಿಗರಾದ ರಜಾಕ್ ಮಾಹಿತಿ ನೀಡಿದರು.
ಗಿರಿಜನರ ಅಭಿವೃದ್ಧಿ ಹೆಸರಿನಲ್ಲಿ ಅನೇಕ ಅಧಿಕಾರಿಗಳು ಸಂಬಳ ಪಡೆಯುತ್ತಿದ್ದಾರೆ. ಆದರೆ ಗಿರಿಜನರ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿಲ್ಲ. ನಿರ್ಗತಿಕರಾಗಿರುವ ಗಿರಿಜನರು ದಾಖಲಾತಿಗೆ ಅರ್ಜಿ ಸಲ್ಲಿಸಿದರೆ, ಪೂರಕ ದಾಖಲಾತಿ ನೆಪ ಹೇಳಿ ಅರ್ಜಿಯನ್ನು ತಿರಸ್ಕಾರ ಮಾಡುತ್ತಿದ್ದಾರೆ. ಇಲ್ಲಿನವರಿಗೆ ಆಧಾರ್ಕಾರ್ಡ್, ಚುನಾವಣಾ ಗುರುತಿನ ಚೀಟಿ, ಪಡಿತರ ಚೀಟಿ ಯಾವುದೂ ಇಲ್ಲ. ಇನ್ನು ಅರಣ್ಯ ಹಕ್ಕುಪತ್ರ ಹೇಗೆ ಪಡೆಯಲು ಸಾಧ್ಯ ಎಂದು ವಾರ್ಡ್ ಸದಸ್ಯ ಅನುಕುಮಾರ್ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಮಾಜ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಜಂಟಿಯಾಗಿ ಗಿರಿಜನರ ಹಾಡಿಯಲ್ಲಿ ವಾಸ್ತವ್ಯ ಹೂಡಿ, ಗಿರಿಜನರಿಗೆ ಎಲ್ಲಾ ದಾಖಲಾತಿಯನ್ನು ಮಾಡಿಕೊಡಬೇಕು. ತಪ್ಪಿದಲ್ಲಿ ನೂರು ವರ್ಷ ಕಳೆದರೂ ಗಿರಿಜನರಿಗೆ ಸರ್ಕಾರಿ ಸೌಲಭ್ಯಗಳು ದೊರೆಯುವುದಿಲ್ಲ. ಎಲ್ಲಾ ಇಲಾಖೆಗಳ ಅಧಿಕಾರಿಗಳ ನಿರ್ಲಕ್ಷö್ಯದಿಂದ ಗಿರಿಜನರು ಅನ್ನಕ್ಕಾಗಿ ಪರದಾಡುವಂತಾಗಿದೆ ಎಂದು ಸದಸ್ಯರಾದ ಗೋಪಾಲಕೃಷ್ಣ, ಶಂಕರ, ಗ್ರಾಮಸ್ಥರಾದ ಎಸ್.ಎಂ.ಕೃಷ್ಣ, ಯೋಗೇಶ್ ಟೀಕಿಸಿದರು.
ಗಿರಿಜನರು ಕೊಟ್ಟ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಕಂದಾಯ ಇಲಾಖೆಯ ಅಧಿಕಾರಿಗಳು ತಿರಸ್ಕಾರ ಮಾಡಬಾರದು. ಪೂರಕ ದಾಖಲಾತಿ ಗಳು ಬೇಕಿದ್ದರೆ, ಗ್ರಾಮಲೆಕ್ಕಿಗರೇ ಸ್ಥಳಕ್ಕೆ ತೆರಳಿ ದಾಖಲಾತಿಗಳನ್ನು ಸಂಗ್ರಹಿಸಿ, ಅರ್ಜಿ ವಿಲೇವಾರಿ ಮಾಡಬೇಕು ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ನಿರ್ದೇಶನ ಮಾಡಬೇಕು. ಈ ಬಗ್ಗೆ ಗ್ರಾ.ಪಂ.ನಿAದ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಬೇಕೆಂದು ಗ್ರಾಮಸಭೆಯಲ್ಲಿ ಒತ್ತಾಯಿಸಲಾಯಿತು.
ದೊಡ್ಡಮಳ್ತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ ೧೦ ಲಕ್ಷ ರೂ. ಗಳಲ್ಲಿ ಶೌಚಾಲಯ ಹಾಗೂ ರಸ್ತೆ ನಿರ್ಮಾಣವಾಗಿದೆ. ಶೌಚಾಲಯ ಕಾಮಗಾರಿ ಸಂಪೂರ್ಣ ಕಳಪೆ ಯಾಗಿದೆ. ಜಿ.ಪಂ ಎಇಇಗೆ ಕರೆ ಮಾಡಿದರೆ, ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಎಸ್ಡಿಎಂಸಿ ಅಧ್ಯಕ್ಷ ಸತೀಶ್ ದೂರಿದರು. ಜಲಜೀವನ್ ಮಿಷನ್ ಯೋಜನೆಯ ಕುಡಿಯುವ ನೀರಿನ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಇದೊಂದು ಸರ್ಕಾರಿ ಹಣವನ್ನು ತಿನ್ನುವ ಯೋಜನೆಯಾಗಿದೆ ಎಂದು ಸದಸ್ಯ ಗೋಪಾಲಕೃಷ್ಣ ದೂರಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಕೆರೆಗಳು ಒತ್ತುವರಿಯಾಗಿದ್ದು, ಒತ್ತುವರಿ ತೆರವು ಕೆಲಸವನ್ನು ಕಂದಾಯ ಇಲಾಖೆ ಮಾಡಬೇಕೆಂದು ಸದಸ್ಯರಾದ ಗೋಪಾಲಕೃಷ್ಣ, ಪ್ರಮೀಳಾ ಒತ್ತಾಯಿಸಿದರು.
ಗ್ರಾಮೀಣ ಭಾಗದಲ್ಲಿ ಅಂಗಡಿಗಳಲ್ಲಿ, ಕೆಲ ಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಅಬಕಾರಿ ಇಲಾಖೆಗೆ ಮಾಹಿತಿ ಕೊಟ್ಟರೆ, ದೂರುದಾರರ ಹೆಸರುಗಳನ್ನು ಅಕ್ರಮ ಮದ್ಯ ದಂಧೆಕೋರರಿಗೆ ತಿಳಿಸುತ್ತಿದ್ದಾರೆ. ಇದರಿಂದ ಜೀವಬೆದರಿಕೆ ಹಾಕಿಸಿಕೊಳ್ಳಬೇಕಾದ ಸಂಕಷ್ಟ ಬಂದಿದೆ ಎಂದು ಗ್ರಾಮಸ್ಥರಾದ ನಾಗಮಣಿ ಅಸಮಾಧಾನ ವ್ಯಕ್ತಪಡಿಸಿದರು.
ಇಲಾಖೆಯ ಕೆಲ ಅಧಿಕಾರಿಗಳು ಈ ದಂಧೆಯಲ್ಲಿ ಪಾಲುದಾರರಾಗಿರುವ ಸಂಶಯವಿದೆ. ಇಲ್ಲದಿದ್ದರೆ ರಾಜಾರೋಷವಾಗಿ ಈ ಮಟ್ಟದಲ್ಲಿ ಅಕ್ರಮ ಮದ್ಯ ಮಾರಾಟ ನಡೆಯಲು ಸಾಧ್ಯವಿಲ್ಲ; ಅಕ್ರಮಕ್ಕೆ ಅಧಿಕಾರಿಗಳ ಪ್ರೋತ್ಸಾಹ ಇರಬಹುದು ಎಂದು ವ್ಯಂಗ್ಯವಾಡಿದ ಗೋಪಾಲಕೃಷ್ಣ, ಕೃಷ್ಣ, ಶಂಕರ ಮತ್ತಿತರು; ಇಲಾಖೆಗೆ ತಾಕತ್ ಇದ್ದರೆ ನಾಳೆಯಿಂದಲೇ ಅಕ್ರಮ ಮದ್ಯ ಮಾರಾಟ ಮಾಡುವ ಅಂಗಡಿಗಳಿಗೆ ಧಾಳಿ ನಡೆಸಿ ಮೊಕದ್ದಮೆ ದಾಖಲಿಸಲಿ ಎಂದು ಸವಾಲು ಹಾಕಿದರು.
ಅಕ್ರಮ ಮದ್ಯ ಮಾರಾಟಕ್ಕೆ ಸಂಬAಧಿಸಿದAತೆ ಅಬಕಾರಿ ಇಲಾಖೆ ಮೊಕದ್ದಮೆ ದಾಖಲಿಸುತ್ತಿದೆ. ದೂರುದಾರರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು. ಅಕ್ರಮ ಮದ್ಯ ಮಾರಾಟದ ಬಗ್ಗೆ ಮಾಹಿತಿಯಿದ್ದರೆ ಇಲಾಖೆಗೆ ತಿಳಿಸುವಂತೆ ಉಪನಿರೀಕ್ಷಕಿ ಸುಮತಿ ಸಭೆಗೆ ತಿಳಿಸಿದರು.
ಸಭೆಯಲ್ಲಿ ವಿವಿಧ ಇಲಾಖಾಧಿಕಾರಿಗಳು ತಮ್ಮ ಇಲಾಖಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಉಪಾಧ್ಯಕ್ಷರಾದ ರಶೀದಾ, ಸದಸ್ಯರಾದ ರುದ್ರಪ್ಪ, ವೀಣಾ, ಭಾಗ್ಯ, ಪಿಡಿಓ ಹರೀಶ್ ಇದ್ದರು.