ಮಡಿಕೇರಿ, ಫೆ. ೧೯: ಹೋರಾಟದ ಸಂದರ್ಭ ಬಿಸಿ ಯೂಟದ ನೌಕರರನ್ನು ಬೆಂಗಳೂರಿ ನಲ್ಲಿ ತಡೆದು ಬಂಧಿಸಿದನ್ನು ವಿರೋಧಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸಿ.ಐ.ಟಿ.ಯು. ನೇತೃತ್ವದಲ್ಲಿ ಕೊಡಗು ಜಿಲ್ಲಾ ಬಿಸಿಯೂಟ ನೌಕರರ ಸಂಘದ ವತಿಯಿಂದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.
ಈ ಸಂದರ್ಭ ಸಂಘದ ಅಧ್ಯಕ್ಷೆ ಪ್ರಮೀಳಾ ಮಾತನಾಡಿ, ಸರ್ಕಾರ ಹೆಣ್ಣು ಮಕ್ಕಳನ್ನು ಬೀದಿಗೆ ತಳ್ಳಿದೆ. ಬೆಳಿಗ್ಗೆ ೯ ಗಂಟೆಗೆ ಶಾಲೆಗೆ ತೆರಳಿದರೆ, ಸಂಜೆ ೪ ಗಂಟೆಗೆ ಮನೆಗೆ ಹಿಂದಿರುಗುತ್ತೇವೆ. ಆದರೆ, ಸರ್ಕಾರ ನಮಗೆ ರೂ. ೩,೬೦೦-೩,೭೦೦ ಗೌರವ ಧನ ನೀಡುತ್ತದೆ. ಈ ವೇತನದಲ್ಲಿ ಜೀವನ ಸಾಗಿಸಲು ಹೇಗೆ ಸಾಧ್ಯ. ಮನೆಯಲ್ಲಿ ಕುಟುಂಬದವರು, ಶಾಲೆಗೆ ತೆರಳುವ ಮಕ್ಕಳು ಇರುತ್ತಾರೆ. ಇಂತಹ ಸಂದರ್ಭದಲ್ಲಿ ಸರ್ಕಾರದ ರೂ. ೩,೬೦೦ ವೇತನ ಪಡೆದು ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ತಿಂಗಳ ವೇತನ ಕೂಡ ಸರಿಯಾದ ಸಮಯಕ್ಕೆ ಲಭ್ಯವಾಗುತ್ತಿಲ್ಲ. ಸರ್ಕಾರ ನಮ್ಮನ್ನು ಕಡಿಗಣಿಸಿದೆ ಎಂದು ದೂರಿದರು.
ಸರ್ಕಾರ ನಮ್ಮ ಕೆಲಸದ ಸಮಯ ವಿಸ್ತರಣೆ ಮಾಡಿದರೂ ಸಮಸ್ಯೆಯಿಲ್ಲ. ಆದರೆ, ಹೆಚ್ಚಿನ ವೇತನ ನೀಡಲಿ. ೨೦ ವರ್ಷದಿಂದ ಕಾರ್ಯನಿರ್ವಹಿಸಿದರೂ ವೇತನ ಹೆಚ್ಚಳವಿಲ್ಲ. ಕೆಲವು ನೌಕರರನ್ನು ಏಕಾಏಕಿ ಕೆಲಸದಿಂದ ಕಿತ್ತುಹಾಕಲಾಗಿದೆ. ಇಂತಹ ನಿರ್ಧಾರ ಖಂಡನೀಯ ಎಂದ ಅವರು, ೬೦ ವರ್ಷ ಮೇಲ್ಪಟ್ಟ ನೌಕರರಿಗೆ ಇಡುಗಂಟು ನೀಡಬೇಕು. ಕನಿಷ್ಟ ೬೦೦೦ ವೇತನ ನೀಡಬೇಕು ಎಂದು ಒತ್ತಾಯಿಸಿದರು. ಇತ್ತೀಚೆಗೆ ಪ್ರತಿಭಟನೆ ಸಂದರ್ಭ ಮಹಿಳೆಯರ ಮೇಲೆ ಪೊಲೀಸರು ದೌರ್ಜನ್ಯ ಎಸಗಿ, ಹೋರಾಟ ಮಾಡಬಾರದು ಎಂದು ಹೇಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಮಗೆ ರಕ್ಷಣೆಯಿಲ್ಲದಾಗಿದೆ. ಬೀದಿಯಲ್ಲಿ ನಿಲ್ಲುವಂತಾಗಿದೆ. ಶಾಲೆಯ ಮಕ್ಕಳನ್ನು ಮಾತ್ರ ನಾವು ನೋಡುವುದಾದರೆ ನಮ್ಮ ಮಕ್ಕಳ ರಕ್ಷಣೆ ಯಾರು ಮಾಡುತ್ತಾರೆ ಎಂದು ಪ್ರಶ್ನಿಸಿದರು. ಪ್ರತಿಭಟನೆಯಲ್ಲಿ ಸಂಘದ ಪೊನ್ನಂಪೇಟೆ ತಾಲೂಕು ಅಧ್ಯಕ್ಷೆ ಜಯಂತಿ, ಕುಶಾಲನಗರ ತಾಲೂಕು ಅಧ್ಯಕ್ಷೆ ಚಾಮುಂಡಿ, ಸಿ.ಐ.ಟಿ.ಯು. ಸಂಘಟನೆ ಜಿಲ್ಲಾಧ್ಯಕ್ಷ ಪಿ.ಆರ್. ಭರತ್, ಪ್ರಧಾನ ಕಾರ್ಯದರ್ಶಿ ಎ.ಸಿ. ಸಾಬು ಹಾಗೂ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.