ಮಹಾ ಶಿವರಾತ್ರಿ ಹಬ್ಬವು ಭಾರತದಾದ್ಯಂತ ಪ್ರಮುಖವಾಗಿ ಆಚರಿಸಲ್ಪಡುವ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬವನ್ನು ಮಾಘ ಮಾಸದ ಬಹುಳ ಚತುರ್ದಶಿಯಂದು ಆಚರಿಸಲಾಗುತ್ತದೆ. ಮಾತ್ರವಲ್ಲದೆ ಶಿವನು ಲಿಂಗ ರೂಪ ತಾಳಿದ ದಿನವಾಗಿದೆ. ಈ ದಿವಸದಿಂದಲೇ ಶಿವನನ್ನು ಲಿಂಗ ರೂಪದಲ್ಲಿ ಪೂಜಿಸಲು ಆರಂಭಿಸಲಾಯಿತು ಎಂಬುವುದು ಪ್ರತೀತಿಯಾಗಿದೆ. ಈ ದಿನದಂದು ವಿಶೇಷವಾಗಿ ಉಪವಾಸ, ಜಾಗರಣೆಯನ್ನು ಆಚರಿಸಿ ಕೈಲಾಸವಾಸಿ ಪರಶಿವನನ್ನು ಪೂಜಿಸಲಾಗುತ್ತದೆ.

ಶಿವರಾತ್ರಿಯ ಆಚರಣೆಯು ತನ್ನದೇಯಾದ ಮಹತ್ವವನ್ನು ಪಡೆದಿದೆ. ಈ ದಿನವು ವಿಶೇಷವಾಗಿ ದೇವತೆಗಳು ಹಾಗೂ ಅಸುರರ ನಡುವೆ ಸಮುದ್ರ ಮಂಥನವಾದಾಗ ವಿಷವು ಉದ್ಭವಿಸಿದಾಗ ಶಿವನು ವಿಷವನ್ನು ಕುಡಿದು ನೀಲಕಂಠ ಎಂದು ಎನಿಸಿದ್ದ ದಿನ. ಮತ್ತೊಂದು ಪುರಾಣ ಕಥೆಯ ಪ್ರಕಾರ ಭಗೀರಥನ ತಪಸ್ಸಿಗೆ ಮೆಚ್ಚಿ ಇಳೆಗೆ ಇಳಿದು ಬಂದ ಗಂಗೆಯನ್ನು ಶಿವ ತನ್ನ ಜಡೆಯಲ್ಲಿ ತುಂಬಿಸಿಕೊAಡಿದ್ದ. ಇದರಿಂದ ವಿಚಲಿತನಾದ ಭಗೀರಥ ಗಂಗೆಯನ್ನು ಭೂಮಿಗೆ ಹರಿಸುವಂತೆ ಶಿವನನ್ನು ಪ್ರಾರ್ಥಿಸಿದ.

ಆತನ ಭಕ್ತಿಗೆ ಮೆಚ್ಚಿ ಶಿವ ಗಂಗೆಯನ್ನು ಹರಿಯ ಬಿಟ್ಟಿದ್ದ ದಿನ ಮಹಾ ಶಿವರಾತ್ರಿ. ಈ ದಿನದಂದೇ ಪರಶಿವ ಹಾಗೂ ಪಾರ್ವತಿ ದೇವಿಯರ ವಿವಾಹವು ನಡೆಯಿತು ಎಂಬ ಪ್ರತೀತಿ ಇದೆ.

ಶಿವರಾತ್ರಿಯಂದು ರಾತ್ರಿಯ ಪೂಜೆಗೆ ವಿಶೇಷ ಮಹತ್ವವಿದೆ. ಬೇರೆ ಹಬ್ಬಗಳಂದು ದೇವರಿಗೆ ಹಗಲು ಪೂಜೆ ನಡೆದರೆ, ಶಿವರಾತ್ರಿಯಂದು ಮಾತ್ರ ರಾತ್ರಿ ಪೂಜೆಯು ನಡೆಯುತ್ತದೆ. ಅಂದರೇ ಶಿವನು ಕತ್ತಲನ್ನು ಹೋಗಲಾಡಿಸುತ್ತಾನೆ ಎಂಬುವುದು ನಂಬಿಕೆ. ಅಜ್ಞಾನವನ್ನು ಹೋಗಲಾಡಿಸಿ ಸುಜ್ಞಾನವನ್ನು ಬೆಳಗಿಸಿ ಜ್ಞಾನ ದೀವಿಗೆಯನ್ನು ಬೆಳಗಿಸುತ್ತಾನೆ.

ಮಹಾ ಶಿವರಾತ್ರಿಯಂದು ಸಂಭ್ರಮ, ಸಡಗರ ಮನೆಮಾತಾ ಗಿರುತ್ತದೆ. ಜನರು ನೋವನ್ನು ಮರೆತು ಹಬ್ಬವನ್ನು ಆಚರಿಸಿ ತಮ್ಮ ಭಕ್ತಿಯನ್ನು ತೋರಿಸುತ್ತಾರೆ. ಮಾತ್ರವಲ್ಲದೆ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ರುದ್ರಾಭಿಷೇಕ, ಕ್ಷೀರಾಭಿಷೇಕ, ಪುಷ್ಪಾರ್ಚನೆ ಸೇವೆಯನ್ನು ಸಲ್ಲಿಸಿ ಪುನೀತರಾಗುತ್ತಾರೆ. ಲೋಕದ ಒಡೆಯ, ಭಕ್ತರ ರಕ್ಷಕ, ದುಷ್ಟ ಸಂಹಾರಕ ಶಿವನನ್ನು ಭಕ್ತಿಯಿಂದ ಆರಾಧಿಸುತ್ತಾರೆ. ಅಂತೆಯೇ ಶಿವನನ್ನು ಭಕ್ತಿಯಿಂದ ಬೇಡಿ ಪೂಜಿಸಿದರೆ ಸಕಲ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬುವುದು ಪುರಾಣ ಕಥೆಗಳಲ್ಲಿ ಉಲ್ಲೇಖವಿದೆ.

ಶಿವನು ಬೇಡಿ ಬಂದ ಭಕ್ತರ ಕೈ ಬಿಡದೆ ಸಲಹುವ ಮಹಾ ಶಕ್ತಿಯಾಗಿದ್ದಾನೆ.

ಮಹಾಶಿವರಾತ್ರಿ ಹಬ್ಬವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಶಿವನು ಸರ್ವರಿಗೂ ಒಳಿತನ್ನು ಮಾಡಲಿ ಎಂದು ಪ್ರಾರ್ಥಿಸೋಣ.

ಸರ್ವರಿಗೂ ಮಹಾ ಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶ ಯಗಳು.

- ಬಿ.ಎನ್. ಶಾಂತಿಭೂಷಣ್, ಉಪನ್ಯಾಸಕರು, ವೀರಾಜಪೇಟೆ.