ಪ್ರತಿ ವರ್ಷದ ಶಿವರಾತ್ರಿಯ ಸಮಯದಲ್ಲಿ ಶಿವನು ಪಾರ್ವತಿಯ ಜೊತೆಯಲ್ಲಿ ಭೂಮಿಗೆ ಆಗಮಿಸಿ, ಭೂಸಂಚಾರ ಮಾಡುತ್ತಾನೆ. ಎಲ್ಲ ಸ್ಥಾವರ ಜಂಗಮ ಲಿಂಗಗಳಲ್ಲಿ ಸಂಕ್ರಮಣಗೊಳ್ಳುತ್ತಾನೆ. ಹಾಗಾಗಿ ಶಿವರಾತ್ರಿಯಂದು ಶಿವನನ್ನು ಯಾರು ಪೂಜಿಸುತ್ತಾರೋ ಅವರ ಪಾಪಗಳು ಪರಿಹಾರವಾಗುತ್ತದೆ ಎಂದು ಸ್ವತಃ ಶಿವನೇ ತಿಳಿಸಿದ್ದಾನೆ ಎಂಬುದಾಗಿ ವಿವಿಧ ಪುರಾಣಗಳಲ್ಲಿ ಹೇಳಲಾಗಿದೆ.
ಇಂದು ನಾವು ಶಿವರಾತ್ರಿಯನ್ನು ಆಚರಿಸುವುದರಿಂದ ವೈಜ್ಞಾನಿಕವಾಗಿ ಹಲವು ಪ್ರಯೋಜನಗಳಿವೆ. ನಮ್ಮ ದೇಹ ಪ್ರಕೃತಿಯಲ್ಲಿರುವ ಚಲನೆಗನುಗುಣವಾಗಿ ಅದರಲ್ಲೂ ಸೂರ್ಯ-ಚಂದ್ರರ ಚಲನೆಯಿಂದಾಗುವ ಎಲ್ಲ ಕಾಲ ವ್ಯತ್ಯಾಸಕ್ಕೆ ಹೊಂದಿಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಈ ಹಬ್ಬದ ಆಚರಣೆ ಬಹುಮುಖ್ಯ. ಈ ಸಮಯದಲ್ಲಿ ಚಳಿಗಾಲವು ಮುಗಿದು ಬೇಸಿಗೆ ಕಾಲವು ಪ್ರಾರಂಭಗೊಳ್ಳುವುದು. ಅಂದರೆ ಈ ದಿನದಂದು ಚಳಿಗಾಲ ಉತ್ತುಂಗದಲ್ಲಿದ್ದು, ಅಂದು ಕೃಷ್ಣಪಕ್ಷದ ಕೊನೆಯ ದಿನವೂ ಆಗಿರುತ್ತದೆ. ಈ ದಿನದಲ್ಲಿ ಸೂರ್ಯನ ಶಾಖ ಕಡಿಮೆಯಾಗಿರುತ್ತದೆ ಮತ್ತು ಚಂದ್ರನ ಪ್ರಕಾಶವೂ ಕ್ಷೀಣಿಸಿರುತ್ತದೆ. ನಮ್ಮ ಪೂರ್ವಜರು ಇದನ್ನೆಲ್ಲಾ ಅರಿತೇ ಹಬ್ಬ ಹರಿದಿನಗಳನ್ನು ಆಚರಿಸುತ್ತಿದ್ದರು. ಈ ವ್ಯತ್ಯಯದ ಸಮಯದಲ್ಲಿ ನಮ್ಮ ದೇಹದಲ್ಲಿ ಬಹಳಷ್ಟು ಬದಲಾವಣೆಗಳಾಗುತ್ತವೆ. ಇದೇ ಸಮಯದಲ್ಲಿ ನೆಗಡಿ, ಕೆಮ್ಮು, ಶೀತ ಮೊದಲಾದವುಗಳು ನಮ್ಮ ದೇಹವನ್ನು ಬಾಧಿಸುತ್ತವೆ. ಈ ದಿನದಂದು ನಾವು ಮಾಡುವ ಶಿವನ ಪೂಜೆ, ಉಪವಾಸಗಳು ನಮಗೆ ತುಂಬಾ ಉಪಯುಕ್ತ. ಆ ದಿನ ಪರಶಿವನಿಗೆ ಜಲದ ಅಭಿಷೇಕ ಮತ್ತು ಬಿಲ್ವಪತ್ರೆಯ ಪೂಜೆ ನಡೆಯುತ್ತದೆ. ಬಿಲ್ವಪತ್ರೆಯಲ್ಲಿ ಉಸಿರಾಟದ ತೊಂದರೆ ನಿವಾರಿಸುವ ಗುಣವಿದೆ.
ಹೀಗೆ ಶಿವರಾತ್ರಿಯ ಬಗ್ಗೆ ಪುರಾಣಗಳಲ್ಲೂ ಉಲ್ಲೇಖವಾಗಿದೆ. ಶ್ರದ್ಧಾಭಕ್ತಿಯಿಂದ ಪಶುಪತಿಯನ್ನು ನಮ್ಮ ಹೃದಯ ಮಂದಿರದಲ್ಲಿ ಪ್ರತಿಷ್ಠಾಪಿಸಿ, ಶಿವಾನುಗ್ರಹಕ್ಕೆ ಪಾತ್ರರಾಗೋಣ.
- ದಂಬೆಕೋಡಿ ಸುಶೀಲ ಸುಬ್ರಮಣಿ, ಮೂರ್ನಾಡು.