ಮಡಿಕೇರಿ, ಫೆ. ೧೭: ನಂದಿಮೊಟ್ಟೆ-ಹೆಬ್ಬಟ್ಟಗೇರಿ-ದೇವಸ್ತೂರು ರಸ್ತೆ ದುರಸ್ತಿಗೆ ಒತ್ತಾಯಿಸಿ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಶೀಘ್ರವಾಗಿ ರಸ್ತೆ ಸರಿಪಡಿಸದಿದ್ದಲ್ಲಿ ಮುಂದಿನ ವಿಧಾನಸಭಾ ಚುನಾವಣೆ ಬಹಿಷ್ಕರಿಸುವುದಾಗಿ ಪ್ರತಿಭಟನಾ ನಿರತರು ಎಚ್ಚರಿಸಿದರು.
ನಂದಿಮೊಟ್ಟೆ ಜಂಕ್ಷನ್ನಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದ ಗ್ರಾಮಸ್ಥರು ಸಂಬAಧಪಟ್ಟ ಅಧಿಕಾರಿಗಳು ಆಗಮಿಸಿ ಸೂಕ್ತ ಭರವಸೆ ನೀಡುವ ತನಕ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದರು. ಗ್ರಾಮದ ವಿದ್ಯಾರ್ಥಿಗಳು, ಮಹಿಳೆಯರು, ಹಿರಿಯ ನಾಗರಿಕರು ಪ್ರತಿಭಟನೆಯಲ್ಲಿ ಭಾಗವಹಿಸಿ ರಸ್ತೆ ದುರಸ್ತಿಗೆ ಒತ್ತಾಯಿಸಿದರು.
ಗ್ರಾಮಸ್ಥ ರಮೇಶ್ ಮಾತನಾಡಿ, ೨ ವರ್ಷಗಳಿಂದ ರಸ್ತೆ ಹದಗೆಟ್ಟ ಪರಿಣಾಮ ಸಂಚಾರಕ್ಕೆ ಸಮಸ್ಯೆಯಾಗಿದೆ. ಇಲ್ಲಿನ ಜನರು ರಸ್ತೆಯಲ್ಲಿ ತೆರಳಬೇಕಾದರೆ ಸಾಹಸ ಮಾಡುವ ಸ್ಥಿತಿ ಸೃಷ್ಟಿಯಾಗಿದೆ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಡಿಕೇರಿಗೆ ಹೋಗುವ ಹಿನ್ನೆಲೆ ರಸ್ತೆ ದುಸ್ಥಿತಿಯಿಂದ ಆಟೋ ಹಾಗೂ ಖಾಸಗಿ ವಾಹನ ಚಾಲಕರು ಗ್ರಾಮಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ತುರ್ತು ಪರಿಸ್ಥಿತಿಯಲ್ಲಿ ವಾಹನವೂ ಬರುವುದಿಲ್ಲ. ಬಂದರೂ ದುಪ್ಪಟ್ಟು ಬಾಡಿಗೆ ಕೇಳುತ್ತಾರೆ. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ. ಸಂಬAಧಪಟ್ಟ ಅಧಿಕಾರಿಗಳ ಗಮನ ಸೆಳೆದರು ಯಾವುದೇ ಪ್ರಯೋಜನ ವಾಗಿಲ್ಲ. ಪ್ರವಾಸಿ ತಾಣ ಮಾಂದಲಪಟ್ಟಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದರು.
ಲೋಕೋಪಯೋಗಿ ಇಲಾಖೆಯ ಅಧಿಕಾರಿ ಯುವರಾಜು ಸ್ಥಳಕ್ಕಾಗಮಿಸಿ ಮಾತನಾಡಿ, ರಸ್ತೆಗೆ ತೇಪೆ ಕಾರ್ಯಕ್ಕೆ ರೂ. ೧೧ ಲಕ್ಷ ತೇಪೆ ಹಾಕಲು ಲಭ್ಯವಿದೆ. ಹೆಚ್ಚುವರಿ ಅನುದಾನ ಬೇಕಾದಲ್ಲಿ ಅದನ್ನು ಪಡೆದು ಉತ್ತಮ ರಸ್ತೆ ಮಾಡಲಾಗುವುದು ಎಂದು ವಿವರಿಸುತ್ತಿರುವ ವೇಳೆ ಪ್ರತಿಭಟನಾಕಾರರು ತೇಪೆ ಕಾರ್ಯಕ್ಕೆ ವಿರೋಧಿಸಿದರು. ಗುಣಮಟ್ಟದ ರಸ್ತೆ ಮಾಡಬೇಕು. ಇಲಾಖೆ ಸಮರ್ಪಕವಾಗಿ ರಸ್ತೆ ನಿರ್ವಹಣೆ ಮಾಡುತ್ತಿಲ್ಲ. ಮಾಧ್ಯಮಗಳಲ್ಲಿ ವರದಿ ಬಂದ ತಕ್ಷಣ ರಸ್ತೆ ದುರಸ್ತಿಗೆ ಕ್ರಮವಹಿಸಬೇಕಾಗಿತ್ತು ಎಂದು ಕಿಡಿಕಾರಿದಲ್ಲದೆ ನೀವು ಗುಂಡಿ ಮುಚ್ಚುವುದು ಬೇಡ. ರಸ್ತೆಯಲ್ಲಿ ಇರುವ ಜಲ್ಲಿ ತೆಗೆದುಕೊಡಿ, ಮಣ್ಣಿನಲ್ಲಿ ಸಮತಟ್ಟು ಮಾಡಿ ನಾವೇ ಸರಿಪಡಿಸಿಕೊಳ್ಳುತ್ತೇವೆ. ಈ ರಸ್ತೆಯನ್ನು ನೋಡಿದರೆ ನಿಮಗೆ ಪ್ಯಾಚ್ ವರ್ಕ್ ಮಾಡುವ ತರ ಇದೆಯೇ? ಇಲ್ಲಿ ಅನಾಹುತ ಸಂಭವಿಸಿದ ಮೇಲೆ ನೀವು ಬರುತ್ತಿರಷ್ಟೇ. ಕೆಲವು ಭಾಗದಲ್ಲಿ ರಸ್ತೆಯೇ ಇಲ್ಲ. ೧೧ ಲಕ್ಷದಲ್ಲಿ ಈ ರಸ್ತೆ ದುರಸ್ತಿ ಸಾಧ್ಯವಿದೆಯೇ ಎಂದು ಪ್ರಶ್ನಿಸಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಕೆ. ನಿಡುಗಣೆ ಗ್ರಾ.ಪಂ. ಅಧ್ಯಕ್ಷ ಡೀನ್ ಬೋಪಣ್ಣ ಮಾತನಾಡಿ, ಗುತ್ತಿಗೆದಾರರ ನಿರ್ಲಕ್ಷದಿಂದ ಈ ಸಮಸ್ಯೆಯಾಗಿದೆ. ಅಂತವರನ್ನು ಕಪ್ಪುಪಟ್ಟಿಗೆ ಸೇರಿಸಿ ಎಂದು ಆಗ್ರಹಿಸಿದರು.
೨ ದಿನಗಳಲ್ಲಿ ಕಾಮಗಾರಿ ಆರಂಭಿಸಲಾಗುವುದು. ಲಭ್ಯವಿರುವ ಅನುದಾನಕ್ಕಿಂತ ಹೆಚ್ಚಿನ ಹಣ ಬೇಕಿದ್ದಲ್ಲಿ ಹೆಚ್ಚವರಿ ಅನುದಾನ ಪಡೆದು ಗುಣಮಟ್ಟದ ರಸ್ತೆ ಮಾಡಲಾಗುವುದು ಎಂದು ಗ್ರಾಮಸ್ಥರಿಗೆ ಅಧಿಕಾರಿ ಯುವರಾಜು ಲಿಖಿತವಾಗಿ ಭರವಸೆ ನೀಡಿದ ಹಿನ್ನೆಲೆ ಪ್ರತಿಭಟನೆ ಕೈಬಿಡಲಾಯಿತು. ೨ ದಿನದೊಳಗೆ ಕಾಮಗಾರಿ ಕೈಗೆತ್ತಿಕೊಳ್ಳದಿದ್ದಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ರಸ್ತೆ ತಡೆ ನಡೆಸಿದ ಪರಿಣಾಮ ಕೆಲಕಾಲ ವಾಹನ ಸಂಚಾರದಲ್ಲಿ ದಟ್ಟಣೆ ಏರ್ಪಟ್ಟಿತ್ತು. ಮಾಂದಲಪಟ್ಟಿ, ಅಬ್ಬಿಜಲಪಾತ, ಆರ್.ಟಿ.ಓ. ಕಚೇರಿಗೆ ತೆರಳಬೇಕಾದವರು ಸಮಸ್ಯೆ ಅನುಭವಿಸಿದರು.
ಈ ಸಂದರ್ಭ ಗ್ರಾಮಸ್ಥರಾದ ಕುಕ್ಕೇರ ಲಕ್ಷö್ಮಣ್, ರಘು, ಸುಜಿತ್, ಸತೀಶ್, ನಯನ್, ವಿನೋದ್, ದಿನೇಶ್, ದರ್ಶಿತ್, ರಂಜಿತ್, ಮಂಜುಳಾ, ನೇತ್ರ, ಶಾರದ, ಫಿಲೋಮಿನಾ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸೆಲ್ವಿನ್ ವಿಜಯ್ ಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.