ಸೋಮವಾರಪೇಟೆ, ಫೆ. ೧೭: ಬಿಲ್ಲವ ಸಮಾಜದ ಉತ್ಸಾಹಿ ಯುವಕರ ತಂಡದ ವತಿಯಿಂದ ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಮೈದಾನದಲ್ಲಿ ತಾ. ೧೮ ಮತ್ತು ೧೯ರಂದು ಜಿಲ್ಲಾ ಮಟ್ಟದ ಬಿಲ್ಲವ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ನಡೆಯಲಿದೆ.
ಈ ಕುರಿತು ಕರ್ಕಳ್ಳಿ ಬಾಣೆ ನಿವಾಸಿ ಬಿ.ಎಸ್.ದೀಪಕ್ ಮತ್ತು ಬಳಗುಂದ ಸುಂದರ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಬಿಲ್ಲವ ಸಮಾಜ ಬಾಂಧವರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಈ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗಿದ್ದು, ಜಿಲ್ಲೆಯ ಬಿಲ್ಲವ ಸಮಾಜ ಬಾಂಧವರು ಪಾಲ್ಗೊಳ್ಳಲ್ಲಿದ್ದಾರೆ ಎಂದರು. ವಿಜೇತ ತಂಡಕ್ಕೆ ೪೫,೦೦೦ ನಗದು ಹಾಗೂ ಪಾರಿತೋಷಕ, ದ್ವಿತೀಯ ೨೫,೦೦೦ ನಗದು ಮತ್ತು ಪಾರಿತೋಷಕ ನೀಡಲಾಗುವುದು. ಪಂದ್ಯ ಪುರುಷೋತ್ತಮ, ಸರಣಿ ಪುರುಷೋತ್ತಮ ಸೇರಿದಂತೆ ವಿವಿಧ ವಿಭಾಗಗಳಲ್ಲಿ ವೈಯಕ್ತಿಕ ಸಾಧನೆಗಾಗಿ ಬಹುಮಾನ ನೀಡಲಾಗುವುದು.
ಶಾಸಕ ಅಪ್ಪಚ್ಚು ರಂಜನ್, ಯುವ ಮುಖಂಡ ಮಂಥರ್ಗೌಡ ಸೇರಿದಂತೆ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.