ಸೋಮವಾರಪೇಟೆ, ಫೆ. ೧೭: ತಾಲೂಕಿನ ಮೂವತ್ತೊಕ್ಲು ಗ್ರಾಮದ ಈಚೆ ಬದಿಯಲ್ಲಿರುವ ಕೋಟೆ ಬೆಟ್ಟದ ಸಾಲಿನಲ್ಲಿ ನಿನ್ನೆ ರಾತ್ರಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ರಾತ್ರಿಯಿಡೀ ಬೆಟ್ಟದಲ್ಲಿ ಬೆಂಕಿಯ ರುದ್ರನರ್ತನ ನಡೆದಿದೆ.
ನಿನ್ನೆ ಮಧ್ಯಾಹ್ನದ ಸಮಯದಲ್ಲಿ ಬೆಂಕಿ ಹತ್ತಿಕೊಂಡಿರಬಹುದು ಎಂದು ಸಂಶಯಿಸಲಾಗಿದ್ದು, ಸಂಜೆ ಹಾಗೂ ರಾತ್ರಿ ವೇಳೆಯಲ್ಲಿ ಬೆಂಕಿಯು ವ್ಯಾಪಕವಾಗಿ ಹರಡಿಕೊಂಡಿದ್ದು, ಗಾಳಿಯ ರಭಸಕ್ಕೆ ಅಗ್ನಿ ನರ್ತನ ಹೆಚ್ಚಾಗಿತ್ತು.
ನಿನ್ನೆ ರಾತ್ರಿ ದಟ್ಟ ಕಾಡು ಹಾಗೂ ಬೆಟ್ಟಕ್ಕೆ ತೆರಳಲು ಅಸಾಧ್ಯವಾದ ಹಿನ್ನೆಲೆ ಇಂದು ಬೆಳಿಗ್ಗೆಯಿಂದಲೇ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಲು ಹರಸಾಹಸಪಡುವಂತಾಯಿತು. ಸದ್ಯಕ್ಕೆ ಕಾಡ್ಗಿಚ್ಚು ತಹಬದಿಗೆ ಬಂದಿದೆ ಎಂದು ಅಗ್ನಿಶಾಮಕ ಇಲಾಖಾ ಸಿಬ್ಬಂದಿಗಳು ತಿಳಿಸಿದ್ದಾರೆ.