ಭಾರತೀಯ ಭಕ್ತಿ ಪರಂಪರೆಯಲ್ಲಿ ಎಲ್ಲಾ ದೇವಾನುದೇವತೆಗಳಿಗೆ ಒಂದೊAದು ದಿನದ ವಿಶೇಷತೆ ನೀಡುವ ಸಂಪ್ರದಾಯ ನಡೆದು ಬಂದಿದೆ. ಸಂಪ್ರದಾಯದAತೆ ಗೌರಿಗೆ ತದಿಗೆ, ಗಣೇಶನಿಗೆ ಚೌತಿ, ನಾಗದೇವರಿಗೆ ಪಂಚಮಿ, ದುರ್ಗಾದೇವಿಗೆ ಅಷ್ಟಮಿ, ಶ್ರೀರಾಮನಿಗೆ ನವಮಿ, ಶ್ರೀಹರಿ ವಿಷ್ಣುವಿಗೆ ಏಕಾದಶಿ, ಶನಿಗೆ ತ್ರಯೋದಶಿ, ಅದೇ ರೀತಿ ಶಿವನಿಗೆ ಚತುರ್ದಶಿ ತಿಥಿ ಅತ್ಯಂತ ಪ್ರಿಯವಾಗಿದೆ. ಪ್ರತೀ ತಿಂಗಳಲ್ಲಿ ಕೃಷ್ಣಪಕ್ಷದ ಚತುರ್ದಶಿ ತಿಥಿಯನ್ನು ಮಾಸ ಶಿವರಾತ್ರಿ ಎನ್ನುತ್ತಾರೆ. ಮಾಘ ಬಹುಳ ಚರ್ತುದಶಿಗೆ ಮಹಾ ಶಿವರಾತ್ರಿ ಎಂಬುದಾಗಿ ಪ್ರಚಲಿತದಲ್ಲಿದ್ದು, ಅಂದೇ ಆಚರಣೆಯೂ ನಡೆಯುತ್ತದೆ.
ಕೃಷ್ಣಪಕ್ಷ ಚತುರ್ದಶಿಯು ಅರ್ಧರಾತ್ರಿ ವ್ಯಾಪಿಸಿದೆಯೋ ಅಂದು ಮಹಾಶಿವರಾತ್ರಿ ದಿವಸ. ಎಲ್ಲರೂ ಉಪವಾಸ ಮಾಡು ವುದು ಕ್ರಮ (ವೃದ್ಧ ರೋಗಿ, ಮಕ್ಕಳನ್ನು ಹೊರತುಪಡಿಸಿ) ಇಡೀ ರಾತ್ರಿ ಶಿವನ ಅಭಿಷೇಕದಲ್ಲಿ ಪಾಲ್ಯೊಂಡು ಶಿವಕಥಾ ಶ್ರವಣ ಮಾಡಬೇಕೆಂದಿದೆ ಅದುವೇ ಮಹಾಶಿವರಾತ್ರಿ. ಮಾಘಕೃಷ್ಣ ಚತುರ್ದಶಿಯ ಮಹಾಶಿವರಾತಿ ್ರಯಲ್ಲಿ ಕೋಟಿ ಸೂರ್ಯ ಸಮಪ್ರಭನಾದ ಶಿವನು ಲಿಂಗಾಕಾರದಲ್ಲಿ ಪ್ರಾತುರ್ಭವಿಸಿದ ‘‘ಶಿವಭದ್ರ ಕಲ್ಯಾಣಂ ಮಂಗಳA ಶುಭಂ’’
ಎಂಬುದು ಶಿವ ಶಬ್ದಕ್ಕೆ ಅರ್ಥ. ಶಿವ ಎಂಬ ಎರಡಕ್ಷರವನ್ನು ಉಚ್ಛರಿಸಿ ದವರಿಗೆ ಅವರವರ ಕರ್ಮಫಲದ ಪ್ರಕಾರ ಸ್ವರ್ಗ ಮತ್ತು ಮೋಕ್ಷಗಳನ್ನು ಅನುಗ್ರಹಿಸುತ್ತಾನೆಂಬುದು ಹಿರಿಯರ ಮಾತು, ಅಂದ ಮೇಲೆ ಅಂತಹ ಮಹಾಮಹಿಮನಾದ ಶಿವನನ್ನು ಪೂಜೆ ಮಾಡುವುದಿಲ್ಲವೆಂದು ಯಾರು ತಾನೇ ಹೇಳುತ್ತಾರೆ . ‘‘ಶಿವರಾತ್ರಿ ಜಾತ್ರೆಯೊಳು ಶ್ರೀಶೈಲಗಾತ್ರದೊಳು ಚೆಲುವ ಮಲ್ಲಿಕಾರ್ಜುನ ಶಿವತತ್ವ ಸ್ತೋತ್ರಗಳಧಿಕ ಸರ್ವಜ್ಞ’’
ಶಿವರಾತ್ರಿಯಂದು ಜಾಗರಣೆ ಮಾಡುತ್ತಾ ಶಿವನ ಯಕ್ಷಗಾನ, ಭಜನೆ, ನೃತ್ಯ ಮುಂತಾದವುಗಳನ್ನು ನೋಡಿದರೆ ಬಹಳ ಉತ್ತಮ ಹಾಗೂ ಮರು ದಿವಸ ಸೂರ್ಯೋದಯಕ್ಕೆ ಸರಿಯಾಗಿ ಎದ್ದು ಸ್ನಾನ ಮಾಡಿ ಶಿವನ ದರ್ಶನ ಮಾಡುವುದು ಬಹಳ ಶ್ರೇಯಸ್ಕರವೆಂದು ಹೇಳಲಾಗಿದೆ.
ಅಭಿಷೇಕ ಪ್ರಿಯ ಶಿವ, ಅಲಂಕಾರ ಪ್ರಿಯ ವಿಷ್ಣು’’ ಎಂಬAತೆ ಶಿವನು ಅಭಿಷೇಕ ಪ್ರಿಯನು ಆದಕಾರಣ ಶಿವನಿಗೆ ಪ್ರಿಯವಾದ ಬಿಲ್ವಪತ್ರೆಯ ಅರ್ಪಣೆಯೊಂದಿಗೆ ಅಭಿಷೇಕ ಮಾಡಿದರೆ ಶ್ರೇಯಸ್ಕರ.
ಮಹಾಶಿವರಾತ್ರಿಯಂದು ಅರ್ಜುನನಿಗೆ ಪರಶಿವನು ಪಾಶುಪತಾಸ್ತçವನ್ನು ಅನುಗ್ರಹಿಸಿದ್ದು, ಸಮುದ್ರ ಮಂಥನ ಕಾಲದಲ್ಲಿ ಉಂಟಾದ ಘೋರ ವಿಷವನ್ನು ಪಾನಮಾಡಿ ಜಗತ್ತನ್ನು ವಿಪತ್ತಿನಿಂದ ಕಾಪಾಡಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ.
ಸೃಷ್ಟಿ, ಸ್ಥಿತಿ, ಲಯಗಳು ಈ ಜಗತ್ತಿನ ಮುಖ್ಯ ಲಕ್ಷಣವಾಗಿದೆ. ಸೃಷ್ಟಿಕರ್ತ ಬ್ರಹ್ಮ ನಾದರೆ, ಸ್ಥಿತಿಯ ಅಧಿದೇವತೆ ವಿಷ್ಣು, ಅಂತೆಯೇ ಶಿವ ಲಯಕರ್ತನೆಂದು ಹೇಳಲಾಗುತ್ತಿದೆ. ರುದ್ರನೆಂದು ಪ್ರಸಿದ್ಧಿ ಹೊಂದಿದರೂ ಲಯ (ನಾಶ)ಕ್ಕೆ ಕಾರಣವಾಗುವ ದೇವತೆಯಾದರೂ ಶಿವನು ಪರಮ ಕರುಣಾಮಯಿ, ನಿರಾಡಂಭರಿ, ಸರಳ, ಶುದ್ಧ ಮನಸ್ಸಿನಿಂದ ಪೂಜಿಸಿದರೆ ಆತ ಒಲಿದು ಬೇಡಿದ ವರಗಳನ್ನು ಕರುಣಿಸುವವನು.
ಶಿವನನ್ನು ಹರ, ನೀಲಕಂಠ, ಶಂಕರ, ಮಹಲಿಂಗೇಶ್ವರ, ಗಂಗಾಧರ, ನಂಜುAಡೇಶ್ವರ, ಓಂಕಾರ, ಈಶ್ವರ ಇತ್ಯಾದಿ ಹೆಸರುಗಳಿಂದ ನೆನೆಯುತ್ತಾರೆ.
ಶಿವರಾತ್ರಿಯ ಮತ್ತೊಂದು ವಿಶೇಷವೆಂಧರೆ, ಶಿವನು ಪಾರ್ವತಿ ದೇವಿಯನ್ನು ವರಿಸಿದ ದಿನವಾಗಿದೆ. ಶಿವರಾತ್ರಿಯಂದು ಪಾರ್ವತಿದೇವಿ ಬಿಲ್ವಪತ್ರೆಯನ್ನು ಅರ್ಪಿಸಿ ಶಿವನ ಜಪವನ್ನು ಮಾಡಿ ಒಲಿಸಿಕೊಂಡು ವಿವಾಹ ವಾದಳೆಂದು ಹಿಂದೂ ಪುರಾಣ ಗಳಲ್ಲಿ ಹೇಳಲಾಗಿದೆ.
ಶಿವರಾತ್ರಿಗೆ ವೈಜ್ಞಾನಿಕ ಹಿನ್ನೆಲೆ ಇದೆ. ಈ ಸಮಯದಲ್ಲಿ ಚಳಿಗಾಲ ಮುಗಿದು ಬೇಸಿಗೆ ಕಾಲ ಪ್ರಾರಂಭ ವಾಗುವುದು. ಆ ದಿನ ಸೂರ್ಯನ ಶಾಖ ಕಡಿಮೆ ಇದ್ದು, ಚಂದ್ರನ ಪ್ರಕಾಶವೂ ಕ್ಷೀಣಿಸಿರುತ್ತದೆ. ಈ ವ್ಯತ್ಯಯದ ಸಮಯದಲ್ಲಿ ಮಾನವನ ದೇಹದಲ್ಲಿ ಬಹಳಷ್ಟು ಬದಲಾವಣೆಗಳಾಗುತ್ತವೆ. ಉಸಿರಾಟದ ತೊಂದರೆ, ಶೀತ, ನೆಗಡಿ ಇತ್ಯಾದಿ ಆದುದರಿಂದ ಅಂದು ಪರಶಿವನಿಗೆ ನೀರಿನ ಅಭಿಷೇಕದೊಂದಿಗೆ ಬಿಲ್ವಪತ್ರೆ ಅರ್ಪಿಸಲಾಗುತ್ತದೆ. ಬಿಲ್ವಪತ್ರೆಯಲ್ಲಿ ಉಸಿರಾಟದ ತೊಂದರೆ ನಿವಾರಿಸುವ ಗುಣ ಇರುವುದಾಗಿ ಸಾಧು ಸಂತರ ಅಭಿಪ್ರಾಯವಾಗಿದೆ.
ಕೆಲವು ಪ್ರಮುಖ ಶಿವ ದೇವಾಲಯಗಳು ಶ್ರೀಕ್ಷೇತ್ರ ಧರ್ಮಸ್ಥಳ, ಕೋಲಾರದ ಕೋಟಿಲಿಂಗ ದೇವಾಲಯ, ಮುರುಡೇಶ್ವರ, ಗೋಕರ್ಣದ ಆತ್ಮಲಿಂಗ ಮಹಾಬಲೇಶ್ವರ, ನಂಜನಗೂಡು ನಂಜುAಡೇಶ್ವರ, ಮಡಿಕೇರಿಯ ಓಂಕಾರೇಶ್ವರ, ಮಹಾಲಿಂಗೇಶ್ವರ, ಭಗಂಡೇಶ್ವರ ಇತ್ಯಾದಿ... ಪ್ರಂಬನಾನ್ ದೇಗುಲ-ಇಂಡೋನೇಷಿಯಾ, ಶಿವವಿಷ್ಣು ದೇವಾಲಯ-ಮೇರಿಲ್ಯಾಂಡ್ ಮತ್ತು ಸೌತ್ ಪ್ಲೋರಿಡಾ ಜುರಿಟ್ ಶಿವ ದೇವಾಲಯ- ಸ್ವಿಜರ್ಲ್ಯಾಂಡ್, ಶಿವಹಿಂದೂ ದೇವಾಲಯ-ಆಮ್ಸ್ಟೇರ್ಡಮ್, ಶಿವಕೋವಿಲ್-ಲಂಡನ್, ಮಧ್ಯಕೈಲಾಸ ಮಂದಿರ-ಸೌತ್ ಆಫ್ರಿಕಾ, ಪಶುಪತಿನಾಥ ದೇವಾಲಯ-ಕಠ್ಮಂಡು, ಕತಸ್ರಾಜ್ ದೇವಾಲಯ-ಪಾಕಿಸ್ತಾನ, ಮುನೇಶ್ವರ ದೇವಾಲಯ-ಶ್ರೀಲಂಕಾ, ಸಾಗರ್ ಶಿವಾ ದೇವಾಲಯ,-ಮಾರೀಷಸ್.
?ಗೌರಮ್ಮ ಮಾದಮ್ಮಯ್ಯ,
ಮಡಿಕೇರಿ.