ಮುಳ್ಳೂರು, ಫೆ. ೧೭: ಸಮೀಪದ ಶನಿವಾರಸಂತೆ ಗ್ರಾ.ಪಂ. ಆಡಳಿತ ಮಂಡಳಿಯ ಮಾಸಿಕ ಸಭೆ ಗ್ರಾ.ಪಂ. ಅಧ್ಯಕ್ಷೆ ಫರ್ಜಾನ್ ಶಾಹಿದ್ ಖಾನ್ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಕೆಲವು ಮಹತ್ವದ ವಿಷಯಗಳ ಕುರಿತು ಸುದೀರ್ಘ ಚರ್ಚೆಗಳು ನಡೆದವು. ಗ್ರಾ.ಪಂ. ಅಭಿವೃದ್ಧಿ ವಿಷಯಗಳ ಕುರಿತು ನಡೆದ ಚರ್ಚೆಯಲ್ಲಿ ಪಕ್ಕದ ದುಂಡಳ್ಳಿ ಗ್ರಾ.ಪಂ.ಯಲ್ಲಿ ಹಲವು ಅಭಿವೃದ್ಧಿ ಕೆಲಸಗಳಾಗುತ್ತಿದ್ದು ಆ ಗ್ರಾ.ಪಂ.ಗೆ ಹೋಲಿಕೆ ಮಾಡಿದಾಗ ನಮ್ಮ ಗ್ರಾ.ಪಂ.ಯಲ್ಲಿ ಅಭಿವೃದ್ಧಿ ಕಾರ್ಯದಲ್ಲಿ ತೊಡಕಾಗುತ್ತಿದೆ, ನಮ್ಮ ಗ್ರಾ.ಪಂ.ಯಲ್ಲಿ ಕಳೆದ ಎರಡೂವರೆ ವರ್ಷಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗಲು ನಮ್ಮ ಸದಸ್ಯರುಗಳಲ್ಲಿ ಒಗ್ಗಟ್ಟಿನ ಕೊರತೆಯೇ ಕಾರಣವಾಗಿದೆ ಎಂದು ಗ್ರಾ.ಪಂ. ಉಪಾಧ್ಯಕ್ಷ ಎಸ್.ಆರ್. ಮಧು, ಸದಸ್ಯರಾದ ಎನ್.ಎ. ಆದಿತ್ಯಗೌಡ ಅಸಮಾಧಾನ ವ್ಯಕ್ತಪಡಿಸಿದಾಗ ಉಳಿದ ಸದಸ್ಯರು ಇದಕ್ಕೆ ಧ್ವನಿಗೂಡಿಸಿದರು.

ಶನಿವಾರಸಂತೆ ಗ್ರಾ.ಪಂ.ಗೆ ಸೇರಿದ ವಾಣಿಜ್ಯ ಸಂಕೀರ್ಣ, ಇತರ ಕಟ್ಟಡ ಸೇರಿದಂತೆ ಖಾಸಗಿಯವರಿಗೆ ಸೇರಿದ ವಾಣಿಜ್ಯ ಸಂಕೀರ್ಣಗಳ ಮಳಿಗೆಗಳಲ್ಲಿ ಮಳಿಗೆ ಬಾಡಿಗೆ ಪಡೆದ ಯಾರೋ ಒಬ್ಬರು ಮಾಸಿಕ ವಿದ್ಯುತ್ ಬಿಲ್ ಪಾವತಿಸದೆ ಬಾಕಿ ಉಳಿಸಿಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ಸ್ಥಳೀಯ ಸೆಸ್ಕಾಂ ಅವರು ವಿದ್ಯುತ್ ಬಿಲ್ ಪಾವತಿಸದೆ ಬಾಕಿ ಉಳಿಸಿಕೊಂಡ ಒಂದು ಮಳಿಗೆಯ ವಿದ್ಯುತ್ ಸ್ಥಗಿತಗೊಳಿಸದೆ ಇಡಿ ವಾಣಿಜ್ಯ ಸಂಕೀರ್ಣದ ಮಳಿಗೆಗಳ ವಿದ್ಯುತ್ ಸರಬರಾಜು ಸ್ಥಗಿತಗೊಳಿಸುತ್ತಿರುವ ಬಗ್ಗೆ ಸದಸ್ಯರೆಲ್ಲರೂ ಅಸಮಾಧಾನ ವ್ಯಕ್ತಪಡಿಸಿದರು. ಈ ಕುರಿತು ಗ್ರಾ.ಪಂ.ಯಿAದ ಸ್ಥಳೀಯ ಸೆಸ್ಕಾಂ ವಿರುದ್ಧ ಪ್ರತಿಭಟನೆ ನಡೆಸುವಂತೆ ತೀರ್ಮಾನಿಸಲಾಯಿತು. ಶನಿವಾರಸಂತೆ ಹೊಳೆ ಸಮೀಪ ಗ್ರಾ.ಪಂ.ಯಿAದ ತ್ಯಾಜ್ಯ ವಿಲೇವಾರಿ ಮಾಡುತ್ತಿರುವ ಸ್ಥಳದಲ್ಲಿ ಪಕ್ಕದ ಹಂಡ್ಲಿ, ದುಂಡಳ್ಳಿ ಮತ್ತು ನಿಡ್ತ ಗ್ರಾ.ಪಂ.ಗೆ ಸೇರಿದ ಕೆಲವು ವ್ಯಕ್ತಿಗಳು ಇಲ್ಲಿಗೆ ಬಂದು ತ್ಯಾಜ್ಯವನ್ನು ತಂದು ಹಾಕುತ್ತಿದ್ದಾರೆ. ಇದರಿಂದ ತ್ಯಾಜ್ಯ ಹೆಚ್ಚಾಗುತ್ತಿದ್ದು ಇದನ್ನು ನಿಯಂತ್ರಿಸಲು ಈ ಸ್ಥಳದಲ್ಲೇ ಸಿ.ಸಿ. ಕ್ಯಾಮರ ಅಳವಡಿಸುವುದು ಮತ್ತು ಒಂದಿಬ್ಬರು ಕಾವಲುಗಾರರನ್ನು ನೇಮಿಸುವಂತೆ ಚರ್ಚಿಸಲಾಯಿತು. ಪಟ್ಟಣದ ಕೆಆರ್‌ಸಿ ವೃತ್ತದಲ್ಲಿರುವ ಸಿನಿಮಾ ಥಿಯೇಟರ್ ಬಳಿಯಲ್ಲಿ ಕೆಲವು ವ್ಯಕ್ತಿಗಳು ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದು, ಇಲ್ಲಿ ಕುಡುಕರ ಕಾಟ ಜಾಸ್ತಿಯಾಗುತ್ತಿದ್ದು ಇಲ್ಲಿ ಪ್ರತಿದಿನ ಜಗಳ, ಗಲಾಟೆಯಾಗುತ್ತಿದ್ದು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗದಿರುವ ಬಗ್ಗೆ ಸದಸ್ಯರು ಚರ್ಚಿಸಿದರು. ಈ ಕುರಿತು ಜಿಲ್ಲಾಧಿಕಾರಿಗಳಿಗೆ ದೂರು ನೀಡುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಕೆಆರ್‌ಸಿ ವೃತ್ತದ ಬನ್ನಿಮಂಟಪ ಬಳಿ ರಸ್ತೆಯ ಚರಂಡಿ ಅವ್ಯವಸ್ಥೆ ಬಗ್ಗೆ ಚರ್ಚಿಸಲಾಯಿತು. ಪಟ್ಟಣದ ತ್ಯಾಗರಾಜ ಕಾಲೋನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ತಡೆಗೋಡೆ ಹಾರಿ ಶಾಲೆ ಆವರಣವನ್ನು ಪ್ರವೇಶಿಸುತ್ತಿರುವ ಕೆಲವು ಪುಂಡರು ರಾತ್ರಿ ವೇಳೆ ಶಾಲೆಯಲ್ಲಿ ಮೋಜು ಮಾಡುತ್ತಿರುವ ಬಗ್ಗೆ ನಡೆದ ಚರ್ಚೆಯಲ್ಲಿ ಇಲ್ಲಿ ಸಿ.ಸಿ. ಟಿವಿ ಅಳವಡಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಈ ತಿಂಗಳಲ್ಲಿ ಕೆಡಿಪಿ ಸಭೆ ಮತ್ತು ಸಂತೆ ಮಾರುಕಟ್ಟೆ ಸೇರಿದಂತೆ ವಿವಿಧ ಮೀನು, ಮಾಂಸದ ಮಳಿಗೆಗಳ ಬಹಿರಂಗ ಹರಾಜು ನಡೆಸುವ ಬಗ್ಗೆ ಚರ್ಚಿಸ ಲಾಯಿತು. ಸಭೆಯಲ್ಲಿ ಸಾರ್ವಜನಿಕರ ಅರ್ಜಿ ಅಹವಾಲುಗಳನ್ನು ವಿಲೇವಾರಿ ಮಾಡಲಾಯಿತು.

ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಎಸ್.ಆರ್. ಮಧು, ಸದಸ್ಯರಾದ ಎಸ್.ಎನ್. ರಘು, ಶರತ್‌ಶೇಖರ್, ಸರ್ದಾರ್ ಅಹಮ್ಮದ್, ಎನ್.ಎ. ಆದಿತ್ಯಗೌಡ, ಸರಸ್ವತಿ, ಕಾವೇರಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮೇದಪ್ಪ, ಕಾರ್ಯದರ್ಶಿ ದೇವರಾಜ್, ಗ್ರಾ.ಪಂ. ಸಿಬ್ಬಂದಿ ವಸಂತ್‌ಕುಮಾರ್, ಫೌಜಿಯ, ಲೀಲಾ ಮುಂತಾದವರು ಹಾಜರಿದ್ದರು.