ಬೆಂಗಳೂರು, ಫೆ. ೧೭: ತಮ್ಮ ಎರಡನೆಯ ಹಾಗೂ ಈ ಸರ್ಕಾರದ ಕೊನೆಯ ಬಜೆಟ್ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಮಂಡನೆ ಮಾಡಿದರು. ಸುದೀರ್ಘ ೨ ಗಂಟೆಗೂ ಹೆಚ್ಚು ಕಾಲ ಸಿಎಂ ಆಯವ್ಯಯ ವಿಧಾನಸಭೆಯ ಮುಂದಿಟ್ಟರು. ಇದಕ್ಕೂ ಮುನ್ನ, ಬೆಂಗಳೂರಿನ ಶ್ರೀಕಂಠೇಶ್ವರ ದೇವಸ್ಥಾನ ಹಾಗೂ ಶ್ರೀ ಆಂಜನೇಯ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ಸಿಎಂ ಪೂಜೆ ನೆರವೇರಿಸಿದರು.
ಆಯವ್ಯಯಕ್ಕೆ ಜನವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ದೂರಗಾಮಿಯುಳ್ಳ ಬಜೆಟ್ ಎಂದು ಬಿಜೆಪಿ ಸಮರ್ಥಿಸಿಕೊಂಡರೆ, ವಿಪಕ್ಷಗಳು ಇದು ಚುನಾವಣಾ ಗಿಮಿಕ್ನ ಬಜೆಟ್ ಜೊತೆಗೆ ಇದರಿಂದ ಪ್ರಯೋಜನವಿಲ್ಲ ಎಂದು ಟೀಕಿಸಿವೆ.
ಕೊಡಗಿಗೆ ಏಕ ಕೊಡುಗೆ
ಕೊಡಗಿಗೆ ಈ ಬಾರಿ ಏಕ ಕೊಡುಗೆ ಮಾತ್ರ ನೀಡಲಾಗಿದೆ. ರೂ. ೩,೦೯,೧೮೨ ಕೋಟಿಯ ಬಜೆಟ್ನಲ್ಲಿ ಕಾವೇರಿ ತವರು ಕೊಡಗಿಗೆ ರಸ್ತೆಯ ಅಭಿವೃದ್ಧಿಗೆ ರೂ. ೧೦೦ ಕೋಟಿ ವಿಶೇಷ ಪ್ಯಾಕೇಜ್ ಹೊರತುಪಡಿಸಿ ಬೇರೆ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ, ಹೊಸ ಯೋಜನೆಗಳಿಗೆ ಆಯವ್ಯಯದಲ್ಲಿ ಹಣ ಒದಗಿಸಿಲ್ಲ. ಕೊಡಗನ್ನು ಕಾಡುತ್ತಿರುವ ವನ್ಯಜೀವಿ ಮಾನವ ಸಂಘರ್ಷ ತಡೆಗೆ ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಪ್ರಸ್ತಾವನೆಯನ್ನು ಮತ್ತೊಮ್ಮೆ ಮುಂದಿಡಲಾಗಿದೆ. ಅದರೊಂದಿಗೆ ವನ್ಯಜೀವಿ ದಾಳಿಯಿಂದ ಮೃತಪಟ್ಟ ಕುಟುಂಬಕ್ಕೆ ನೀಡುತ್ತಿದ್ದ ರೂ. ೭.೫೦ ಲಕ್ಷ ಪರಿಹಾರ ಧನವನ್ನು ರೂ. ೧೫ ಲಕ್ಷಕ್ಕೆ ಹೆಚ್ಚಿಸಲಾಗಿದೆ.
ವಿದ್ಯಾಸಿರಿಯ ವಿಸ್ತರಣೆ, ಸಹಕಾರ ಸಂಘಗಳಲ್ಲಿ ಶೂನ್ಯ ಬಡ್ಡಿದರಕ್ಕೆ ನೀಡುತ್ತಿದ್ದ ಸಾಲದ ಮೊತ್ತ ಹೆಚ್ಚಳ, ಆಟೋ ಚಾಲಕರಿಗೆ ವಿಮೆ ಸೌಲಭ್ಯ, ಯಶಸ್ವಿನಿ ಮರು ಆರಂಭದಿAದ ಜನರಿಗೆ ಕೊಂಚ ಸಹಕಾರಿಯಾಗಲಿದೆ. ಇದನ್ನು ಹೊರತುಪಡಿಸಿ ನಿರ್ದಿಷ್ಟವಾಗಿ ಕೊಡಗಿಗೆಂದು ಯಾವುದೇ ಯೋಜನೆ ಬಜೆಟ್ನಲ್ಲಿಲ್ಲ. ಪ್ರವಾಸೋದ್ಯಮ ಬೆಳವಣಿಗೆ, ೧೦ ಹೆಚ್.ಪಿ. ಪಂಪ್ಸೆಟ್ಗೆ ಉಚಿತ ವಿದ್ಯುತ್, ಕ್ರೀಡಾಂಗಣಗಳ ನಿರ್ಮಾಣ, ಕೊಡವ ಅಭಿವೃದ್ಧಿ ನಿಗಮ ಸೇರಿದಂತೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇನ್ನಿತರ ನಿರೀಕ್ಷೆಗಳು ಇದೀಗ ಹುಸಿಯಾಗಿವೆ.