ಮಡಿಕೇರಿ, ಫೆ. ೧೭: ಕಾಫಿ ಬೆಳೆಗಾರರ ವಿದ್ಯುತ್ ಬಾಕಿ ಬಿಲ್ ಮನ್ನಾ ಕುರಿತಂತೆ ಆರ್ಥಿಕ ಇಲಾಖೆಗೆ ಪಸ್ತಾವನೆ ಸಲ್ಲಿಸಲಾಗಿದೆ ಎಂದು ಶಿಕ್ಷಣ ಸಚಿವ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಅಪ್ಪಚ್ಚು ರಂಜನ್ ಅವರ ಪ್ರಶ್ನೆಗೆ ಇಂಧನ ಸಚಿವ ಸುನಿಲ್ ಕುಮಾರ್ ಪರವಾಗಿ ಉತ್ತರಿಸಿದರು. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದಾಗಲೇ ಕಾಫಿ ಬೆಳೆಗಾರರ ವಿದ್ಯುತ್ ಬಾಕಿ ಬಿಲ್ ಮನ್ನಾ ಮಾಡುವುದಾಗಿ ಹೇಳಿದ್ದರು. ಇದುವರೆಗೂ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಾಫಿ ಬೆಳೆಗಾರರ ಮನವಿಯಂತೆ ರಾಜ್ಯ ಸರಕಾರ ಸಣ್ಣ ಮತ್ತು ಮಧ್ಯಮ ಕಾಫಿ ಬೆಳೆಗಾರರ ೧೦ಹೆಚ್ಪಿವರೆಗಿನ ನೀರಾವರಿ ವಿದ್ಯುತ್ ಪಂಪ್ಸೆಟ್ ಸ್ಥಾವರಗಳ ವಿದ್ಯುತ್ ಶುಲ್ಕವನ್ನು ಡಿಬಿಟಿ ಯೋಜನೆಯ ವ್ಯವಸ್ಥೆಯಡಿ ಸರ್ಕಾರದಿಂದ ಪಾವತಿಸಲು ಆದೇಶಿಸಲಾಗಿದೆ ಎಂದು ಹೇಳಿದ್ದಾರೆ. ದನಿಗೂಡಿಸಿದ ಶಾಸಕ ಕೆ.ಜಿ. ಬೋಪಯ್ಯ ೪೨ ಕೋಟಿ ರೂ. ಬಾಕಿ ಇದೆ. ಬಹಳ ಏನೂ ಇಲ್ಲ. ಮನ್ನಾ ಮಾಡಿ. ಆರ್ಥಿಕ ಇಲಾಖೆಗೆ ಕಡತ ಹೋಗಿ ೧ ವರ್ಷ ಆಗಿದೆ. ಅನುಮೋದನೆಗೆ ೧ ವರ್ಷ ಬೇಕೇ ಎಂದು ಪ್ರಶ್ನಿಸಿದರು.