ಕಡಂಗ, ಫೆ. ೧೭: ಕಡಂಗ ಪ್ರೀಮಿಯರ್ ಲೀಗ್ ಕ್ರಿಕೆಟ್ನಲ್ಲಿ ರೈಸಿಂಗ್ ಸ್ಟಾರ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತಿ. ಬ್ಲಾಸ್ಟರ್ಸ್ ತಂಡ ೨ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಕಡಂಗ ಪ್ರೀಮಿಯರ್ ಕ್ರಿಕೆಟ್ ಲೀಗ್ನ ಫೈನಲ್ ಪಂದ್ಯಾಟವು ಮತ್ತು ಸಮಾರೋಪ ಸಮಾರಂಭವು ಕಡಂಗ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ನಡೆಯಿತು.
ಕ್ರೀಡಾಕೂಟದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕ್ರೀಡಾಕೂಟದ ಸಂಸ್ಥಾಪಕ ಜುನಿದ್ ಕೆ.ಎಂ. ವಹಿಸಿದ್ದರು. ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ಹಿರಿಯ ವಕೀಲ ಎ.ಎಸ್. ಪೊನ್ನಣ್ಣ ನೆರವೇರಿಸಿದರು.
ಕ್ರೀಡಾಕೂಟದಲ್ಲಿ ನಿವೃತ್ತ ಯೋಧರಾದ ಸಲಾಂ ಮತ್ತು ಸುಬ್ಬಯ್ಯ ಅವರನ್ನು ಸನ್ಮಾನಿಸಲಾಯಿತು. ಮೊದಲ ಕ್ವಾಲಿಫೈಯರ್ ಪಂದ್ಯಾಟದಲ್ಲಿ ಬಲಿಷ್ಠ ಬ್ಲಾಸ್ಟರ್ ತಂಡವನ್ನು ರೈಸಿಂಗ್ ಸ್ಟಾರ್ ಮಣಿಸಿ ಫೈನಲ್ ಹಂತಕ್ಕೆ ಪ್ರವೇಶಿಸಿತು. ೨ನೇ ಕ್ವಾಲಿಫೈಯರ್ ಪಂದ್ಯಾಟದಲ್ಲಿ ಕ್ರಿಕೆಟ್ ಸ್ಟಾರ್ ತಂಡವನ್ನು ಬ್ಲಾಸ್ಟರ್ ತಂಡ ಮಣಿಸಿ ಫೈನಲ್ ಹಂತಕ್ಕೆ ಪ್ರವೇಶಿಸಿತು.
ಫೈನಲ್ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿದ ರೈಸಿಂಗ್ ಸ್ಟಾರ್ ತಂಡ ಐದು ಓವರ್ಗಳಲ್ಲಿ ೬೨ ರನ್ ಕಲೆ ಹಾಕಿತು. ಈ ಮೊತ್ತವನ್ನು ಬೆನ್ನಟ್ಟಿದ ಬ್ಲಾಸ್ಟರ್ಸ್ ತಂಡ ೪ ಓವರ್ ಎರಡು ಎಸೆತಗಳಲ್ಲಿ ೩೫ ರನ್ ಗಳಿಸಿ ಆಲ್ಔಟ್ ಆಗಿ ರನ್ನರ್ ಪ್ರಶಸ್ತಿ ಪಡೆಯಿತು.
ವೈಯಕ್ತಿಕ ಪ್ರಶಸ್ತಿಗಳ ವಿವರ
ಪಂದ್ಯ ಶ್ರೇಷ್ಠ ಪ್ರಶಸ್ತಿ ರೈಸಿಂಗ್ ಸ್ಟಾರ್ ತಂಡದ ಸುಹೈಲ್, ಕ್ರೀಡಾಕೂಟದ ಉತ್ತಮ ಬೌಲರ್ ನೌಶಾದ್, ಉತ್ತಮ ಕ್ಯಾಚ್ ರಾಜ್, ಸ್ಟೆöÊಲಿಶ್ ಬ್ಯಾಟ್ಸ್ಮ್ಯಾನ್ ಯುನೆಸ್, ಕ್ರೀಡಾಕೂಟದ ಅತ್ಯಧಿಕ ರನ್ ಅಸ್ಕರ್, ಅರ್ಧ ಶತಕ ಬಾರಿಸಿದ ಆಟಗಾರ ಕುಟ್ಟಪ್ಪ, ಉದಯೋನ್ಮುಖ ಆಟಗಾರರು ಅಫ್ರಾಜ್ ಮತ್ತು ಪ್ರಜ್ವತ್ ರಾಯ್ ಹೊರಹೊಮ್ಮಿದರು. ಕ್ರೀಡಾಕೂಟದ ತೀರ್ಪುಗಾರರಾಗಿ ಹನೀಫಾ ಮಡಿಕೇರಿ, ಸುಲ್ತಾನ್, ಸರ್ಫ್ಯೂದ್ದೀನ್, ಕಾರ್ಯನಿರ್ವಹಿಸಿದರು ಸ್ಕೋರರಾಗಿ ನಾಫಿ, ರಾಜಿಕ್, ಅನಸ್, ಆಸ್ಕರ್ ಕಾರ್ಯನಿರ್ವಹಿಸಿದರು. ಕಾರ್ಯಕ್ರಮದ ಸ್ವಾಗತ ಮತ್ತು ನಿರೂಪಣೆಯನ್ನು ಶಮೀರ್ ಪಿ.ಹೆಚ್. ನೆರವೇರಿಸಿದರು.