ಕುಶಾಲನಗರ, ಫೆ. ೧೬: ಕುಶಾಲನಗರ ಪುರಸಭೆ ವ್ಯಾಪ್ತಿಯ ೧೬ ವಾರ್ಡ್ಗಳಲ್ಲಿ ನಗರೋತ್ಥಾನ ಯೋಜನೆಯಡಿ ರೂ. ೫ ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಯಿತು.

ಕುಶಾಲನಗರ ಪುರಸಭೆ ಅಧ್ಯಕ್ಷ ಬಿ. ಜೈವರ್ಧನ್, ಮುಖ್ಯಾಧಿಕಾರಿ ಶಿವಪ್ಪ ನಾಯಕ್, ಸದಸ್ಯರಾದ ಎಂ.ಬಿ. ಸುರೇಶ್, ಕೆ.ಜಿ. ಮನು ಹಾಗೂ ಅಭಿಯಂತರ ರಂಗರಾಮ್ ಅವರುಗಳ ತಂಡ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿತು.

ವಿವಿಧ ವಾರ್ಡ್ಗಳಿಗೆ ಭೇಟಿ ನೀಡಿ ಈಗಾಗಲೇ ಮುಕ್ತಾಯಗೊಂಡಿರುವ ಕಾಂಕ್ರಿಟ್ ರಸ್ತೆ, ಚರಂಡಿ ಕಾಮಗಾರಿ ಹಾಗೂ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ವೀಕ್ಷಿಸಿತು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಪುರಸಭೆ ಅಧ್ಯಕ್ಷ ಬಿ. ಜೈವರ್ಧನ್, ಕುಶಾಲನಗರ ಪಟ್ಟಣದ ವಿವಿಧ ಬಡಾವಣೆಗಳಿಗೆ ಸರಕಾರದಿಂದ ಅನುದಾನ ದೊರಕಿದ್ದು ಶಾಸಕ ಅಪ್ಪಚ್ಚು ರಂಜನ್ ಅವರು ಕಾಮಗಾರಿಗಳಿಗೆ ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿದ್ದರು.

ಸರಕಾರದ ಮಾರ್ಗಸೂಚಿಯಂತೆ ಪುರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಆಯಾ ವಾರ್ಡ್ ವ್ಯಾಪ್ತಿಯಲ್ಲಿನ ಕಾಮಗಾರಿಗಳನ್ನು ಆಯಾ ವಾರ್ಡ್ ಸದಸ್ಯರು ಉತ್ತಮ ಗುಣಮಟ್ಟದಲ್ಲಿ ಕೈಗೊಳ್ಳುತ್ತಿದ್ದಾರೆ. ರೂ. ೧೦ ಕೋಟಿ ವೆಚ್ಚದಲ್ಲಿ ಹಾರಂಗಿ ರಸ್ತೆ, ರೂ. ೫೦ ಲಕ್ಷ ವೆಚ್ಚದಲ್ಲಿ ಗೊಂದಿಬಸವನಹಳ್ಳಿ ರಸ್ತೆ ಕಾಮಗಾರಿಗಳು ಪ್ರಗತಿಯಲ್ಲಿವೆ. ಇದಲ್ಲದೆ ಬಡಾವಣೆಗಳು, ಮುಖ್ಯರಸ್ತೆಗಳ ಅಗಲೀಕರಣ ಕಾಮಗಾರಿ ಕೂಡ ಕೈಗೊಳ್ಳಲಾಗಿದ್ದು ಕುಶಾಲನಗರ ಜನತೆಯ ಸಹಕಾರದಿಂದ ಕಾಮಗಾರಿಗಳು ಭರದಿಂದ ಸಾಗುತ್ತಿದೆ ಎಂದರು.

ಪುರಸಭೆ ೭ನೇ ವಾರ್ಡ್ ಸದಸ್ಯ ಎಂ.ಬಿ. ಸುರೇಶ್ ಮಾತನಾಡಿ, ಶಾಸಕರ ಸಹಕಾರದಿಂದ ಅಭಿವೃದ್ಧಿ ಕೆಲಸಗಳಾಗುತ್ತಿವೆ. ತನ್ನ ವಾರ್ಡ್ಗೆ ರೂ. ೩೦ ಲಕ್ಷ ಅನುದಾನ ಸಿಕ್ಕಿದ್ದು, ಈ ವ್ಯಾಪ್ತಿಯ ಮುಳ್ಳುಸೋಗೆ ಭಾಗಕ್ಕೆ ರೂ. ೫ ಕೋಟಿಯಷ್ಟು ಅನುದಾನ ಒದಗಿಸಿ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ ಎಂದರು. ಈ ಸಂದರ್ಭ ಗುತ್ತಿಗೆದಾರ ಸಂಪತ್ ಇದ್ದರು.