(ರಫೀಕ್ ತೂಚಮಕೇರಿ)

ಪೊನ್ನಂಪೇಟೆ, ಫೆ. ೧೬: ಕಳೆದ ಮಳೆಗಾಲದಲ್ಲಿ ಉಂಟಾದ ಮೋರಿ ಕುಸಿತದಿಂದ ಸಂಚಾರಕ್ಕೆ ಯೋಗ್ಯ ರಸ್ತೆಯಿಲ್ಲದೆ ಗ್ರಾಮಸ್ಥರೇ ಕಂಗೆಟ್ಟಿರುವುದಾಗಿ ಕೊಂಡAಗೇರಿಯ ಎಲಿಯಂಗಾಡ್ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲಿಯಂಗಾಡ್ ಗ್ರಾಮ ವ್ಯಾಪ್ತಿಯಲ್ಲಿರುವ ಗ್ರಾಮೀಣ ರಸ್ತೆಗಳು ಕಳೆದ ಹಲವು ವರ್ಷಗಳಿಂದ ತೀವ್ರ ದುಸ್ಥಿತಿಯಲ್ಲಿದ್ದರೂ ಇದುವರೆಗೂ ಅಭಿವೃದ್ಧಿಯಾಗಿಲ್ಲ. ಇದರಿಂದಾಗಿ ಸಮಸ್ಯೆಗಳ ಸರಮಾಲೆಯಲ್ಲಿ ಎಲಿಯಂಗಾಡ್ ಗ್ರಾಮ ನರಳುವಂತಾಗಿದೆ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಗ್ರಾಮದ ಸಮಸ್ಯೆಗಳ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಗ್ರಾಮಸ್ಥರು, ಸಾಮಾನ್ಯವಾಗಿ ತಾಲೂಕಿನ ಹಲವಾರು ಪ್ರದೇಶಗಳಲ್ಲಿ ಗ್ರಾಮೀಣ ರಸ್ತೆಗಳು ಸುಧಾರಣೆಗೊಂಡರೂ ಎಲಿಯಂಗಾಡ್ ಗ್ರಾಮಕ್ಕೆ ಅಭಿವೃದ್ಧಿ ಎಂಬುವುದು ತೀರಾ ಮರಿಚಿಕೆಯಾಗಿದೆ. ಸಂಬAಧಿಸಿದವರಲ್ಲಿ ಎಷ್ಟೇ ಮನವಿ ಸಲ್ಲಿಸಿದರೂ ಇದುವರೆಗೂ ಯಾವುದೇ ಸ್ಪಂದನ ದೊರೆತಿಲ್ಲ. ೨೦೧೬ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೊಡಗು ಜಿಲ್ಲೆಗೆ ಘೋಷಿಸಲಾಗಿದ್ದ ವಿಶೇಷ ಪ್ಯಾಕೇಜಿನಡಿ ಎಲಿಯಂಗಾಡ್- ಕೇತುಮೊಟ್ಟೆ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿತ್ತು. ಈ ರಸ್ತೆಯಲ್ಲಿದ್ದ ಮೋರಿ ಕಳೆದ ಮಳೆಗಾಲದ ಸಂದರ್ಭದಲ್ಲಿ ದಿಢೀರ್ ಆಗಿ ಕುಸಿದಿತ್ತು. ಇದರಿಂದಾಗಿ ಈ ರಸ್ತೆಯಲ್ಲಿ ಸಂಚಾರವೇ ಕಷ್ಟವಾಗಿದೆ. ದಿನನಿತ್ಯ ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳಿಗೆ ತೆರಳುವುದು ದುಸ್ತರದ ಕೆಲಸವಾಗಿದೆ. ಪ್ರತಿದಿನ ಶಾಲಾ ವಾಹನಗಳು ಅತ್ಯಂತ ಕಷ್ಟಕರವಾಗಿ ಚಲಿಸುತ್ತಿವೆ. ವೈದ್ಯಕೀಯ ಚಿಕಿತ್ಸೆ ಸೇರಿದಂತೆ ಇನ್ನಿತರ ಅಗತ್ಯ ಕಾರ್ಯಗಳಿಗೆ ವಾಹನಗಳಲ್ಲಿ ಈ ರಸ್ತೆಯ ಮೂಲಕ ಜೀವಭಯದಿಂದ ತೆರಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಸಮಸ್ಯೆಗಳನ್ನು ಬಿಚ್ಚಿಟ್ಟರು.

ಕುಸಿದ ಮೋರಿಯನ್ನು ಮತ್ತೆ ದುರಸ್ತಿಪಡಿಸಲು ಸಾಧ್ಯವಿಲ್ಲ. ಆ ಭಾಗದಲ್ಲಿ ಮಿನಿ ಸೇತುವೆಯೇ ನಿರ್ಮಾಣವಾಗಬೇಕು. ಈ ಕುರಿತು ಗ್ರಾಮ ಸಭೆಗಳಲ್ಲಿ ಸಾಕಷ್ಟು ಚರ್ಚೆಯಾಗಿದ್ದರೂ ಗ್ರಾಮಸ್ಥರ ಬೇಡಿಕೆಗೆ ಸ್ಪಂದನ ದೊರಕಲಿಲ್ಲ. ಗ್ರಾಮದ ಎಲ್ಲಾ ರಸ್ತೆಗಳು ತೀವ್ರ ದುಸ್ಥಿತಿಯಲ್ಲಿದ್ದು, ವಾಹನ ಸಂಚಾರವಿರಲಿ ಜನ ಸಂಚಾರಕ್ಕೇ ಕಷ್ಟವಾಗುತ್ತಿದೆ. ಅದರಲ್ಲೂ ಕೊಂಡAಗೇರಿ-ಕೊಪ್ಪ ರಸ್ತೆ, ಕೊಂಡAಗೇರಿ-ಎಲಿಯAಗಾಡ್ ರಸ್ತೆ ತೀವ್ರ ದುಸ್ಥಿತಿಯಲ್ಲಿದೆ. ಆದ್ದರಿಂದ ಜಿಲ್ಲಾಡಳಿತ ಇನ್ನಾದರೂ ಎಚ್ಚೆತ್ತುಕೊಂಡು ಮಿನಿ ಸೇತುವೆ ಮತ್ತು ರಸ್ತೆ ದುರಸ್ತಿಗೆ ಕೂಡಲೇ ಅಗತ್ಯ ಅನುದಾನ ಬಿಡುಗಡೆಗೊಳಿಸಿ ಕಾಮಗಾರಿ ಪ್ರಾರಂಭಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.