ಮಡಿಕೇರಿ, ಫೆ. ೧೬: ಇತ್ತೀಚಿನ ವರ್ಷಗಳಲ್ಲಿ ಕೊಡಗು ಜಿಲ್ಲೆಯಲ್ಲಿ ವನ್ಯಜೀವಿಗಳ ಉಪಟಳ ಮಿತಿ ಮೀರಿದ್ದು, ಮಾನವ ಜೀವಹಾನಿ ನಿರಂತರವಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಖ್ಯಮಂತ್ರಿಗಳು ಕೊಡಗಿನಲ್ಲಿ ವಿಶೇಷ ಸಭೆ ನಡೆಸಬೇಕು ಎಂದು ಆಮ್ ಆದ್ಮಿ ಪಾರ್ಟಿಯ ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷ ಬ್ರಿಜೇಶ್ ಕಾಳಪ್ಪ ಒತ್ತಾಯಿಸಿದ್ದಾರೆ.

ಇಲ್ಲಿಯವರೆಗೆ ಯಾವುದೇ ಅರಣ್ಯ ಸಚಿವರು ಗಂಭೀರ ಸಮಸ್ಯೆಯಾಗಿರುವ ವನ್ಯಜೀವಿಗಳ ದಾಳಿ ಕುರಿತು ಕೊಡಗಿನಲ್ಲಿ ವಿಶೇಷ ಸಭೆ ನಡೆಸಿಲ್ಲ. ಜಿಲ್ಲೆಯ ಕೃಷಿಕ ವರ್ಗವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಇಲ್ಲಿನ ಸಮಸ್ಯೆಗಳ ಬಗ್ಗೆ ಗಂಭೀರ ಚಿಂತನೆಯನ್ನು ಮಾಡಿಲ್ಲ್ಲ. ವನ್ಯಜೀವಿ ಉಪಟಳ ತಡೆಗೆ ಶಾಶ್ವತ ಯೋಜನೆ ರೂಪಿಸುವ ಉತ್ಸಾಹ ತೋರಿಲ್ಲ. ಕಾಫಿ ಬೆಳೆಯ ಮೂಲಕ ದೇಶದ ಆರ್ಥಿಕ ಕ್ಷೇತ್ರಕ್ಕೆ ಅತ್ಯಧಿಕ ಸಂಪನ್ಮೂಲವನ್ನು ಒದಗಿಸಿಕೊಡುತ್ತಿದ್ದರೂ ಕೊಡಗು ಜಿಲ್ಲೆಯ ಬೆಳೆಗಾರರ ಬಗ್ಗೆ ಸರ್ಕಾರದ ತಾತ್ಸಾರ ಮುಂದುವರೆದಿದೆ ಎಂದು ಆರೋಪಿಸಿದ್ದಾರೆ.

ಸರ್ಕಾರದ ನಿರ್ಲಕ್ಷö್ಯದ ವಿರುದ್ಧ ಜನ ರೊಚ್ಚಿಗೇಳುವ ಮೊದಲು ಮುಖ್ಯಮಂತ್ರಿಗಳು ಜಿಲ್ಲೆಗೆ ಭೇಟಿ ನೀಡಿ ವನ್ಯಜೀವಿ ಸಮಸ್ಯೆ ಕುರಿತು ವಿಶೇಷ ಸಭೆ ನಡೆಸುವುದು ಸೂಕ್ತ ಎಂದು ಬ್ರಿಜೇಶ್ ಕಾಳಪ್ಪ ತಿಳಿಸಿದ್ದಾರೆ.