ಮಡಿಕೇರಿ, ಫೆ. ೧೬: ಮಡಿಕೇರಿ ಸಮೀಪದ ಮೇಕೇರಿಯ ಶ್ರೀ ಗೌರಿಶಂಕರ ದೇವಾಲಯದಲ್ಲಿ ಮಹಾಶಿವರಾತ್ರಿ ಮಹೋತ್ಸವವು ತಾ. ೧೭ರಿಂದ ತಾ. ೧೯ರವರೆಗೆ ನಡೆಯಲಿದೆ.
ತಾ. ೧೭ ಬೆಳಿಗ್ಗೆ ೯.೩೦ಕ್ಕೆ ಉತ್ಸವದ ಧ್ವಜಾರೋಹಣ, ಪ್ರಾತಃ ದೈವೀಕ ಕಾರ್ಯದೊಂದಿಗೆ ಮಹಾಪೂಜೆ, ಪ್ರಸಾದ ವಿತರಣೆ. ಸಂಜೆ ೬ ರಿಂದ ವಿವಿಧ ಈಶ್ವರ ಆರಾಧನೆ, ಭಕ್ತಿ ಸಂಗೀತಾರ್ಚನೆ, ಮಹಾಪೂಜೆ. ನಂತರ ಅನ್ನಸಂತರ್ಪಣೆ ನಡೆಯಲಿದೆ.
ತಾ. ೧೮ ರಂದು ಮಹಾ ಶಿವರಾತ್ರಿ ಆರಾಧನೆ ಸೇವೆಗಳು ನಡೆಯಲಿದ್ದು, ಅಂದು ಬೆಳಗ್ಗೆ ಗ್ರಾಮದ ಭಕ್ತರಿಂದ ಹೊರೆ ಕಾಣಿಕೆ ಸಮರ್ಪಣೆ ನಡೆಯಲಿದೆ. ಉಷಾ ಪೂಜೆ, ಮಹಾ ಮೃತ್ಯುಂಜಯ ಹೋಮ, ರುದ್ರಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ ಇರಲಿದೆ. ಸಂಜೆ ೬ ರಿಂದ ವಿವಿಧ ಪೂಜೆಯೊಂದಿಗೆ ರುದ್ರಾಭಿಷೇಕ, ರಾತ್ರಿ ೯.೩೦ಕ್ಕೆ ರಂಗಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಜಾಗರಣೆಗಾಗಿ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ರಾಮಾನಾಯಕ್ ಪೆರ್ಲ ಮತ್ತು ಶಶಾಂಕ್ ಎಲಿಮಲೆ ಭಾಗವತಿಕೆಯಲ್ಲಿ ಯಕ್ಷ-ಗಾನ ನಾಟ್ಯ ವೈಭವ ಎಂಬ ವಿನೂತನ ಪ್ರದರ್ಶನ ನಡೆಯಲಿದೆ. ತಾ. ೧೯ ರಂದು ಬೆಳಿಗ್ಗೆ ೬.೦೦ ರಿಂದ ಮಧ್ಯಾಹ್ನ ೧ ಗಂಟೆಯವರೆಗೆ ವಿವಿಧ ದೇವತಾರಾಧನೆಯೊಂದಿಗೆ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.