ಮಡಿಕೇರಿ, ಫೆ. ೧೬: ಬಾವಿಯಲ್ಲಿ ಬಿದ್ದು ಹೊರಬರಲಾರದೆ ಜೀವನ್ಮರಣ ಸ್ಥಿತಿಯಲ್ಲಿದ್ದ ಚಿರತೆಯೊಂದನ್ನು, ಪಂಜರದ ಸಹಾಯದಿಂದ ಬಾವಿಗೆ ಇಳಿದು ಕೋವಿಯ ಮೂಲಕ ಅರವಳಿಕೆ ಚುಚ್ಚು ಮದ್ದು ನೀಡಿ, ಪ್ರಜ್ಞಾಹೀನವಾದ ಬಳಿಕ ಚಿರತೆಯನ್ನು ತಾವಿದ್ದ ಪಂಜರದಲ್ಲೇ ಕೂರಿಸಿ ಬಾವಿಯಿಂದ ಹೊರಕ್ಕೆ ಸಾಗಿಸಿ ರಕ್ಷಣೆ ಮಾಡಿದ ಸಾಹಸಕಾರಿ ಕಾರ್ಯಕ್ಕೆ ಕೊಡಗು ಮೂಲದ ವನ್ಯಜೀವಿ ಪಶುವೈದ್ಯೆ ಪಂದಿಕAಡ ಮೇಘನಾ ಪೆಮ್ಮಯ್ಯ ಸಾಕ್ಷಿಯಾಗಿದ್ದಾರೆ.

ದಕ್ಷಿಣ ಕನ್ನಡದ ಮೂಡಬಿದ್ರಿ ಸಮೀಪದ ನಿಡ್ಡೊಡಿ ಎಂಬಲ್ಲಿ ಚಿರತೆಯೊಂದು ತಾ. ೧೩ ರಂದು ಬಾವಿಗೆ ಬಿದ್ದಿದ್ದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ೨೫ ಅಡಿ ಆಳದ ಬಾವಿಯೊಳಗೆ ಬಿದ್ದಿದ್ದ ಚಿರತೆಯು ಬಾವಿಯಲ್ಲಿನ ಸಣ್ಣ ರಂದ್ರದೊಳಗೆ ಅವಿತುಕೊಂಡಿದ್ದು, ಮೇಲಿನಿಂದ ಅರವಳಿಕೆ ಪ್ರಯೋಗಿಸಿದರೆ ಗುರಿ ತಾಗುವುದು ಅಸಾಧ್ಯ ಎಂಬುದನ್ನು ಅರಿತ ಇಲಾಖೆ ಮಂಗಳೂರಿನ ವನ್ಯಜೀವಿ ಪಶುವೈದ್ಯರ ರಕ್ಷಣಾ ತಂಡವಾದ ‘ಚಿಟ್ಟೆ-ಪಿಲಿ’À ಸಹಕಾರದಿಂದ ಸಾಹಸಕಾರಿ ಕಾರ್ಯಾಚರಣೆಗೆ ಮುಂದಾಯಿತು. ಅರವಳಿಕೆ ಪ್ರಯೋಗಿಸಲು ಅರ್ಹರಿರುವ ಈ ತಂಡದಲ್ಲಿ ಒಬ್ಬರಾದರೂ ಪಂಜರದ ಮೂಲಕ ಬಾವಿಗೆ ಇಳಿದು ಕೋವಿ ಮೂಲಕ ಚಿರತೆ ಹತ್ತಿರದಿಂದ ಅರವಳಿಕೆ ಪ್ರಯೋಗಿಸಿದರೆ ಮಾತ್ರ ರಕ್ಷಣಾ ಕಾರ್ಯ ಯಶಸ್ವಿಯಾಗುವುದಾಗಿ ಚರ್ಚೆಯಲ್ಲಿ ನಿರ್ಧಾರಕ್ಕೆ ಬರಲಾಯಿತು.

ಈ ಸಾಹಸಮಯ ಕಾರ್ಯಕ್ಕೆ ಮುಂದಾಗಿದ್ದು ಮೂಲತಃ ಹಾಲುಗುಂದ ಗ್ರಾಮದ ಇದೀಗ ಮಂಗಳೂರಿನಲ್ಲಿರುವ ವನ್ಯಜೀವಿ ಪಶುವೈದ್ಯೆ ಮೇಘನಾ ಪೆಮ್ಮಯ್ಯ ಅವರು. ಯಾವುದೇ ಹಿಂಜರಿಕೆಯಿಲ್ಲದೆ ಸ್ವಯಂ ಅವರೇ ಪಂಜರದೊಳಗೆ ಸೇರಿ ಚಿರತೆ ರಕ್ಷಿಸುವುದಾಗಿ ಧೈರ್ಯದಿಂದ ಒಪ್ಪಿಕೊಂಡರು.

ಚುಚ್ಚುಮದ್ದು ಪ್ರಯೋಗಿಸಲು ಬೇಕಾದ ಎಲ್ಲಾ ಪರಿಕರಗಳು ಹಾಗೂ ಕೋವಿಯೊಂದಿಗೆ ಪಂಜರದೊಳಗೆ ಮೇಘನಾ ಅವರು ಸೇರಿಕೊಂಡರು. ಹಗ್ಗದ ಮೂಲಕ ಗ್ರಾಮಸ್ಥರು ಮೆಲ್ಲಮೆಲ್ಲನೆ ಪಂಜರವನ್ನು ಬಾವಿ ಕೆಳಕ್ಕೆ ಜನರ ನೆರವಿನಿಂದ ಇಳಿಸಲಾಯಿತು. ಈ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದ್ದು, ರೋಮಾಂಚನಕಾರಿಯಾಗಿದೆ. ಸದ್ಯ ಈ ವೀಡಿಯೋ ಕೂಡ ರಾಷ್ಟçಮಟ್ಟದಲ್ಲಿಯೇ ವೈರಲ್ ಆಗಿದೆ. ಪಂಜರ ಇಳಿಸುವಾಗ ವ್ಯತ್ಯಾಸಗಳಾಗಿದ್ದಲ್ಲಿ ವೈದ್ಯೆಯ ಪ್ರಾಣಕ್ಕೆ ಅಪಾಯ ಸಂಭವಿಸಬಹುದಾದ ಸನ್ನಿವೇಶಗಳು ಎದುರಾಗುತ್ತಿತ್ತು. ಇವೆಲ್ಲದರ ನಡುವೆ ಅತ್ಯಂತ ತಾಳ್ಮೆಯಿಂದ ಕೋವಿಗೆ ಅರವಳಿಕೆ ಚುಚ್ಚುಮದ್ದು ಅಳವಡಿಸುವುದರಲ್ಲೇ ಮೇಘನಾ ಅವರು ತಲ್ಲೀನರಾಗಿದ್ದರು. ಚಿರತೆ ೨ ದಿನಗಳ ಕಾಲ ಆಹಾರವಿಲ್ಲದೆ ನಿತ್ರಾಣಗೊಂಡಿತ್ತಾದರೂ ತೀರಾ ಹತ್ತಿರ ಹೋಗಿದ್ದಲ್ಲಿ ಪಂಜರದ ಮೇಲೆ ಎಗರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿರಲಿಲ್ಲ. ಇವಾವುದನ್ನೂ ಲೆಕ್ಕಿಸದೆ ಮೇಘನಾ ಅವರು ತಾಳ್ಮೆಯಿಂದ ಯಶಸ್ವಿಯಾಗಿ ಚುಚ್ಚು ಮದ್ದು ಪ್ರಯೋಗ ಮಾಡಿದರು. ಸುಮಾರು ೧೫ ನಿಮಿಷಗಳ ಬಳಿಕ ಚಿರತೆ ಪ್ರಜ್ಞೆ ಕಳೆದುಕೊಂಡಿತು. ಸ್ಥಳೀಯ ಯುವಕರ ಸಹಕಾರದಿಂದ ಪ್ರಜ್ಞಾಹೀನ ಚಿರತೆಯನ್ನು ಮೇಘನಾ ಅವರಿದ್ದ ಪಂಜರದೊಳಗೇ ಇರಿಸಿ ನಂತರ ಪಂಜರವನ್ನು ಮೇಲಕ್ಕೆ ತರಲಾಯಿತು. ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಮೇಘನಾ ಅವರ ಸಾಹಸಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಯಿತು. ಸುಮಾರು ೩೬ ಗಂಟೆಗಳ ಕಾಲ ನಿತ್ರಾಣಗೊಂಡು ಬಾವಿಯಲ್ಲಿ ಬಿದ್ದಿದ್ದ ಚಿರತೆಯನ್ನು ಸುಮಾರು ೨ ಗಂಟೆಗಳ ಕಾಲ ನಡೆದ ಕಾರ್ಯಾಚರಣೆ ಮೂಲಕ ರಕ್ಷಿಸಲಾಯಿತು.

ಮೇಘನಾ ಅವರು ಮೂಲತಃ ಹಾಲುಗುಂದ ಗ್ರಾಮದ ದಿವಂಗತ ಪಿ.ಎಮ್ ಪೆಮ್ಮಯ್ಯ ಹಾಗೂ ಪಿ.ಪಿ ಸರಸು ಅವರ ಪುತ್ರಿ. ತಮ್ಮ ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿಯೇ ಪೂರ್ಣಗೊಳಿಸಿರುವ ಮೇಘನಾ, ವನ್ಯಜೀವಿ ಪಶುವೈದ್ಯಕೀಯ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದು, ಇದೀಗ ಮಂಗಳೂರಿನಲ್ಲಿ ವನ್ಯಜೀವಿ ಪಶುವೈದ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕಾರ್ಯಾಚರಣೆಯ ಕುರಿತು ‘ಶಕ್ತಿ’ಯೊಂದಿಗೆ ಮಾತನಾಡಿದ ಮೇಘನಾ ಅವರು, ಚಿರತೆ ರಕ್ಷಿಸಲು ಬೇರಾವುದೇ ಮಾರ್ಗವಿರಲಿಲ್ಲ. ಬಾವಿಯಲ್ಲಿದ್ದರೂ ಸಣ್ಣ ರಂದ್ರವೊAದರೊಳಗೆ ಅವಿತುಕೊಂಡಿದ್ದ ಕಾರಣ ಮೇಲಿನಿಂದ ಅರವಳಿಕೆ ನೀಡಲು ಅಸಾಧ್ಯವಾಗಿತ್ತು. ಪಂಜರವನ್ನು ಕೆಳಕ್ಕಿಳಿಸಿದ ಕ್ಷಣವೇ ಚಿರತೆ ಗೋಚರವಾಯಿತು. ಯಾವುದೇ ಹಿಂಜರಿಕೆಯಿಲ್ಲದೆ ಅರವಳಿಕೆ ಪ್ರಯೋಗಿಸಿದೆ ಎಂದು ಅನುಭವ ಕುರಿತು ಹಂಚಿಕೊAಡರು. ವನ್ಯಜೀವಿ ಪಶು ವೈದ್ಯಕೀಯ ಕ್ಷೇತ್ರದಲ್ಲಿ ಸ್ನಾತಕೋತ್ತರ ಮಾಡಿದ್ದ ಕಾರಣ, ಕೋವಿ ಮೂಲಕ ಚುಚ್ಚು ಮದ್ದು ಪ್ರಯೋಗಿಸುವ ತರಬೇತಿ ಕೂಡ ಪದವಿ ಶಿಕ್ಷಣದ ಒಂದು ಭಾಗವಾಗಿದೆ. ಇದಲ್ಲದೆ ಕೊಡಗಿನಲ್ಲಿ ಆಗಾಗ್ಗೆ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸಿ ಅಭ್ಯಾಸವಿದ್ದ ಕಾರಣ ಅರವಳಿಕೆ ಪ್ರಯೋಗಿಸಲು ಸುಲಭವಾಯಿತು ಎಂದು ತಮ್ಮ ಅಭಿಪ್ರಾಯ ಹಂಚಿಕೊAಡರು. ಕಳೆದ ೫ ವರ್ಷಗಳಿಂದ ಮಂಗಳೂರಿನಲ್ಲಿ ಖಾಸಗಿ ಕ್ಲಿನಿಕ್‌ನೊಂದಿಗೆ ‘ಚಿಟ್ಟೆ-ಪಿಲಿ’ ಎಂಬ ವನ್ಯಜೀವಿ ರಕ್ಷಣಾ ತಂಡದ ಮೂಲಕ ಹಲವು ರಕ್ಷಣಾ ಕಾರ್ಯಗಳಲ್ಲಿ ಭಾಗವಹಿಸಿ ಹಾವು, ಹಕ್ಕಿಗಳು, ಕೋತಿ ಸೇರಿದಂತೆ ವಿವಿಧ ಪ್ರಾಣಿಗಳ ರಕ್ಷಣೆ ಮಾಡಿರುವುದಾಗಿ ಮೇಘನಾ ಅವರು ಮಾಹಿತಿ ಇತ್ತರು.